ಮಂಗಳೂರು,ಜು.31- ಧರ್ಮಸ್ಥಳದ ಸುತ್ತಮುತ್ತ ಹೂತಿಟ್ಟ ಶವಗಳ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಸತತವಾಗಿ ಮೂರನೇ ದಿನವಾದ ಇಂದು ನಡೆಸಿದ ಶೋಧ ಕಾರ್ಯದ ವೇಳೆ ಮಾನವನ ಮೂಳೆಗಳು ಪತ್ತೆಯಾಗಿವೆ.
ಅನಾಮಧೇಯ ವ್ಯಕ್ತಿ ಗುರುತಿಸಿದ 6ನೇ ಸ್ಪಾಟ್ (ಸ್ಥಳ)ದಲ್ಲಿ ಇಂದು 15 ಕಾರ್ಮಿಕರಿಂದ ಉತ್ಖನನ ನಡೆಸುತ್ತಿದ್ದ ವೇಳೆ ಮೃತದೇಹಗಳ ಮೂಳೆಗಳು ಪತ್ತೆಯಾಗಿದ್ದು, ಎಸ್‌ಐಟಿ ಇದನ್ನು ಸಂಗ್ರಹಿಸಿಟ್ಟುಕೊಂಡಿದೆ.ಬೆಳಿಗ್ಗೆ 11 ಗಂಟೆಯಿಂದ ಉತ್ಖನನ ಕಾರ್ಯವನ್ನು 6ನೇ ಸ್ಪಾಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಸುರಿವ ಮಳೆಯನ್ನೂ ಲೆಕ್ಕಿಸದೆ ಮುಂದುವರೆಸಿದರು.
ಈ ವೇಳೆ 9 ಅಡಿ ಆಳ ತೋಡಿದಾಗ ಕಾರ್ಮಿಕರಿಗೆ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಇದಕ್ಕೂ ಪ್ರಕರಣಕ್ಕೂ ಸಂಬಂಧವಿದೆಯೇ ಎಂದು ಪರಿಶೀಲನೆಗೆ ಒಳಪಡಿಸಲಾಗಿದೆ.
ಸಿಕ್ಕಿರುವ ಕಳೇಬರವನ್ನು ಜೋಪಾನದಿಂದ ಸಂಗ್ರಹಿಸಿಕೊಂಡಿರುವ ಎಸ್‌ಐಟಿ ಇದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಿದೆ.
ಅನಾಮಧೇಯ ವ್ಯಕ್ತಿ ಗುರುತಿಸಿದ್ದ 6ನೇ ಸ್ಪಾಟ್‌ನಲ್ಲಿ ಇಟಾಚಿ ಮೂಲಕ ಕಾರ್ಯಾಚರಣೆಯನ್ನು ಮುಂದುವರೆಸಲಾಗಿತ್ತು. ಈ ವೇಳೆ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ಸಾಕ್ಷ್ಯ ದೊರೆತಂತಾಗಿದೆ.
ಆದರೆ ದೇಹದ ಪೂರ್ತಿಭಾಗಗಳು ಸಿಕ್ಕಿಲ್ಲ. ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ಅಗೆದು ಹುಡುಕಾಟ ನಡೆಸಲಾಗುತ್ತಿದೆ. ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ.ಇಂದು ದೊರೆತಿರುವ ಮೂಳೆಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಕಳೇಬರವು ಮಾನವನದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಏಕೆಂದರೆ ಧರ್ಮಸ್ಥಳದಲ್ಲಿ ಸಾಮಾನ್ಯವಾಗಿ ಮಳೆಗಾಲದ ವೇಳೆ ನೇತ್ರಾವತಿ ನದಿಯಲ್ಲಿ ಪ್ರವಾಹ ಉಂಟಾಗಿ ಅನೇಕ ಕಳೇಬರಗಳು ತೇಲಿಬರುತ್ತಿರುತ್ತವೆ. ಅನಾಮಧೇಯ ವ್ಯಕ್ತಿ ದೂರಿದ ಪ್ರಕರಣಕ್ಕೂ, ಇದಕ್ಕೂ ಹೋಲಿಕೆಯಾಗುತ್ತದೆಯೇ ಎಂಬುದನ್ನು ವೈಜ್ಞಾನಿಕ ರೀತಿಯಲ್ಲೇ ವಿಶ್ಲೇಷಣೆ ಮಾಡಲಾಗುತ್ತದೆ.
ಈ ಕಳೇಬರ ಯಾವ ವ್ಯಕ್ತಿಯದ್ದು, ಯಾವ ವರ್ಷದಲ್ಲಿ, ಯಾವ ದಿನದಲ್ಲಿ ಹೂಳಲಾಗಿದೆ, ನಿಖರವಾದ ಕಾರಣವೇನು ಎಂಬುದೂ ಸೇರಿದಂತೆ ಹಲವಾರು ರೀತಿಯಲ್ಲಿ ತನಿಖೆಗೆ ಒಳಪಡಿಸಲಾಗುತ್ತದೆ.ಈಗಾಗಲೇ ಐದು ಗುಂಡಿಗಳನ್ನು ತೆಗೆಯಲಾಗಿದ್ದು, ಯಾವುದೇ ಅವಶೇಷಗಳು ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಡಿಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಪತ್ತೆಯಾಗಿವೆ.
- ಲಭ್ಯವಾಗಿರುವ ಅಸ್ಥಿಪಂಜರಗಳ ರಹಸ್ಯ ಬೇಧಿಸಲು ಮುಂದಾದ ಎಸ್‌ಐಟಿ
- ಹೂವಿನಲ್ಲಿ ಅರಳಲಿದ್ದಾರೆ ಕಿತ್ತೂರು ರಾಣಿ ಚೆನ್ನಮ ಮತ್ತು ಸಂಗೊಳ್ಳಿ ರಾಯಣ್ಣ
- ರಾಹುಲ್ ಗಾಂಧಿ ಆರೋಪಗಳು ಆಧಾರ ರಹಿತ : ಚುನಾವಣಾ ಆಯೋಗ
- ಸ್ಮೋಕಿಂಗ್ ಜೋನ್ ಇಲ್ಲದ ಬಾರ್ಗಳಿಗೆ ನೋಟೀಸ್
- ಮುಂದುವರೆದ ಸಿಎಂ-ಡಿಸಿಎಂ ಮುಸುಕಿನ ಗುದ್ದಾಟ, ಸಂಧಾನಕ್ಕೆ ‘ಕೈ’ಕಮಾಂಡ್ ಸರ್ಕಸ್