ಉಡುಪಿ, ಆ.23- ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ವಿಚಾರಣೆ ನಡೆದು ವರದಿ ಸಲ್ಲಿಕೆಯಾಗುವವರೆಗೂ ನಾವು ಬಹಿರಂಗ ಪಡಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುದಾರನ ಆಧಾರದ ಮೇಲೆ ಎಸ್‌ಐಟಿ ರಚಿಸಿ ತನಿಖೆ ಆರಂಭಿಸಿತ್ತು. ಈಗ ಆತನನ್ನು ಬಂಧಿಸಲಾಗಿದೆ. ಆತನ ಹೇಳಿಕೆಯ ಆಧಾರದ ಮೇಲೆಯೇ ತನಿಖೆಗಳು ಮುಂದುವರೆಯುತ್ತವೆ. ಆತ ಏನು ಹೇಳಿಕೆ ನೀಡಿದ್ದ ಎಂದು ನಾನು ಬಹಿರಂಗಪಡಿಸುವುದಿಲ್ಲ ಎಂದರು.
ತನಿಖೆ ಹಂತದಲ್ಲಿ ಸಾಕ್ಷಿದಾರರು ಅಥವಾ ದೂರುದಾರರ ಹೇಳಿಕೆಗಳನ್ನು ಬಹಿರಂಗ ಪಡಿಸುವುದು ಸರಿಯಲ್ಲ. ಬಿಜೆಪಿಯವರು ಹೇಳಿದಂತೆ ಅನೇಕರು ಬೇರೆ ಬೇರೆ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾರೆ. ಅದರ ಆಧಾರದ ಮೇಲೆ ತನಿಖೆ ನಿರ್ಧರಿಸಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲ್ಲು ಆಗುವುದಿಲ್ಲ. ತನಿಖೆಯ ಆಂತಿಮ ವರದಿಯವರೆಗೂ ಕಾದು ನೋಡುವುದು ಸೂಕ್ತ.
ಅನಾಮಿಕನನ್ನು ಎಸ್‌ಐಟಿ ಅಧಿಕಾರಿಗಳು ಯಾವ ಸೆಕ್ಷನ್ ಅಡಿ ಬಂಧಿಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ತನಿಖೆಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಲಾಗಿದೆ. ಈ ಹಂತದಲ್ಲಿ ಅನಗತ್ಯವಾದ ಮಾಹಿತಿಗಳನ್ನು ಬಹಿರಂಗ ಪಡಿಸುವುದು ಸರಿಯಲ್ಲ ಎಂದರು. ದೂರುದಾರನಿಗೆ ಮಂಪರು ಪರೀಕ್ಷೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಎಸ್‌ಐಟಿ ಅಧಿಕಾರಿಗಳೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಸುಜಾತ ಭಟ್ ಅವರ ವಿಚಾರಗಳು ಕೂಡ ಎಸ್‌ಐಟಿ ತನಿಖೆಯಲ್ಲಿ ಒಳಗೊಂಡಿವೆ. ಈ ಪ್ರಕರಣದಲ್ಲಿ ಒಳಸಂಚು ಇರುವ ಕುರಿತಂತೆಯೂ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ 28 ಕೊಲೆ ಮಾಡಿದ್ದಾರೆ ಎಂದು ಈಗ ಶಾಸಕರಾಗಿರುವ ಹರೀಶ್‌ಪೂಂಜ 2023ರಲ್ಲಿ ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ. ಅದೇ ಹೇಳಿಕೆಯನ್ನು ಪುನಾರಾವರ್ತನೆ ಮಾಡಿದ ಮಹೇಶ್ ತಿಮರೋಡಿ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದಾರೆ. ಹರೀಶ್‌ಪೂಂಜ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಅದು ತೆರವಾದ ಬಳಿಕ ಅವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ತಿಳಿಸಿದರು.
- ಭಾರತದ ಮೊದಲ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೆಚ್ಡಿಕೆ ಮತ್ತು ಗಡ್ಕರಿ
- ವಿದೇಶಿ ಅಂಚೆ ಕಚೇರಿ ಮೂಲಕ ಡ್ರಗ್ಸ್ ಸಾಗಾಟವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು
- ಗಣತಿಗೆ ತೆರಳುತ್ತಿದ್ದ ಮತ್ತೊಬ್ಬ ಶಿಕ್ಷಕಿ ಮೇಲೆ ನಾಯಿ ದಾಳಿ
- ಪ್ರಾಣಾಪಾಯದ ಬಗ್ಗೆ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದ ವೆಂಕಟೇಶ್ ಅಲಿಯಾಸ್ ಗಿಲ್ಕಿ
- ಇಬ್ಬರು ವಿದೇಶಿ ಪ್ರಜೆಗಳು ಸೇರಿ 6 ಮಂದಿ ಸೆರೆ, 23.84 ಕೋಟಿ ಮೌಲ್ಯದ ಡ್ರಗ್ಸ್ ವಶ