ಬೆಂಗಳೂರು,ಸೆ.10- ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಆರು ಮಂದಿ ಇಂದು ಮತ್ತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ.ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ಯೂಟ್ಯೂಬರ್‌ರಸ ಗಳಾದ ಅಭಿಷೇಕ್ ಮತ್ತು ಮುನಾಫ್ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕಚೇರಿಗೆ ಹಾಜರಾದರು.ಸಾಕ್ಷಿ ದೂರುದಾರನಾಗಿರುವ ಚಿನ್ನಯ್ಯನಿಗೆ ಜಯಂತ್ ಟಿ. ತಮ ಬಗಲಗುಂಟೆಯ ಮಲ್ಲಸಂದ್ರ ಮನೆಯಲ್ಲಿ ಆಶ್ರಯ ನೀಡಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಸಹ ನಾಲ್ಕೈದು ಭಾರಿ ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಇಂದೂ ಸಹ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ವಿವರಗಳನ್ನು ಎಸ್‌ಐಟಿ ಕಲೆಹಾಕುತ್ತಿದೆ.
ಈ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್‌ನ್ನು ಈಗಾಗಲೇ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದರೂ ತಲೆ ಬುರುಡೆಯನ್ನು ಚಿನ್ನಯ್ಯನಿಗೆ ಯಾರು ತಂದುಕೊಟ್ಟಿದ್ದರು ಎಂಬುವುದರ ಬಗ್ಗೆ ಇಂದು ಮತ್ತೆ ವಿಚಾರಣೆ ನಡೆಸಲಾಗಿದೆ.
ಸೌಜನ್ಯ ಮಾವ ವಿಠಲ್‌ಗೌಡ ಧರ್ಮಸ್ಥಳದ ಕಾಡಿನಿಂದ ಬುರುಡೆ ತಂದಿರುವುದಾಗಿ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಸಹ ಈಗಾಗಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದ ಎಸ್‌ಐಟಿ, ಬುರುಡೆ ತಂದಿದ್ದ ಸ್ಥಳದಲ್ಲಿಯೂ ಸಹ ಮಹಜರು ನಡೆಸಿದೆ. ಇಂದು ಮತ್ತೆ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ಅದೇ ರೀತಿ ಯೂಟ್ಯೂಬರ್ ಅಭಿಷೇಕ್, ಅನನ್ಯಭಟ್ ವಿಚಾರವಾಗಿ ಸುಜಾತಾಭಟ್ ಅವರ ಸಂದರ್ಶನ ನಡೆಸಿ ,ಹೇಳಿಕೆ ಪಡೆದುಕೊಂಡು ಅದನ್ನು ವಿಡಿಯೋ ಮಾಡಿ ವೈಭವೀಕರಿಸಿ ಸಾಮಾಜಿಕ ಜಾಲಾ ತಾಣದಲ್ಲಿ ಬಿತ್ತರಿಸಿದ್ದನು. ಈ ವಿಚಾರವಾಗಿ ಈಗಾಗಲೇ ಆತನನ್ನು ಎಸ್‌ಐಟಿ ನಾಲ್ಕೈದು ಭಾರಿ ವಿಚಾರಣೆ ನಡೆಸಿದ್ದು ಇಂದು ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದೆ.
ಅಲ್ಲದೇ ಕೇರಳದ ಲಾರಿ ಮಾಲೀಕ ಹಾಗೂ ಯೂಟ್ಯೂಬರ್ ಮುನಾಫ್‌ನನ್ನು ಸಹ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟೀಸ್ ನೀಡಿತ್ತು.
ಲಾರಿ ಮಾಲೀಕನು ಆಗಿರುವ ಮುನಾಫ್ ಧರ್ಮಸ್ಥಳದ ಸುತ್ತ ಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಬಿತ್ತರಿಸಿ, ಕೇರಳದಲ್ಲೂ ಸಂಚಯನ ಮೂಡಿಸಿದ್ದ. ಅಲ್ಲದೇ ತಲೆ ಬುರುಡೆ ಸಂಬಂಧ ಗ್ಯಾಂಗ್ ಜೊತೆ ಕೇರಳದ ಸಂಸದರೊಬ್ಬರನ್ನು ಸಂಪರ್ಕಿಸಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ವಿಚಾರಣೆ ಎದುರಿಸಿದ್ದು, ಇಂದು ಮತ್ತೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಮತ್ತಿಬ್ಬರ ವಿಚಾರಣೆ:ಸೌಜನ್ಯ ಮಾವ ವಿಠಲ್‌ಗೌಡ ಹಾಗೂ ಅವರ ಸ್ನೇಹಿತ ಪ್ರದೀಪ್ ಸಹ ಎಸ್‌ಐಟಿ ವಿಚಾರಣೆಗೆ ಇಂದು ಹಾಜರಾಗಿದ್ದಾರೆ. ಈಗಾಗಲೇ ಇವರುಗಳನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು.ಒಟ್ಟಾರೆ ಈ ಪ್ರಕರಣದಲ್ಲಿ ಇವರೆಲ್ಲರ ವಿಚಾರಣೆ ಬಹಳಷ್ಟು ಕುತೂಹಲ ಕೆರಳಿಸಿದೆ.