Monday, September 1, 2025
Homeರಾಜ್ಯಧರ್ಮಸ್ಥಳ ಚಲೋ : ಶ್ರೀಕ್ಷೇತ್ರದ ವಿರುದ್ಧದ ಷಡ್ಯಂತ್ರ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಕೇಸರಿ ಪಡೆ ಕೂಗು

ಧರ್ಮಸ್ಥಳ ಚಲೋ : ಶ್ರೀಕ್ಷೇತ್ರದ ವಿರುದ್ಧದ ಷಡ್ಯಂತ್ರ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಕೇಸರಿ ಪಡೆ ಕೂಗು

Dharmasthala Chalo: BJP Demands NIA investigation on conspiracy case against Dharmasthala

ಬೆಂಗಳೂರು,ಸೆ.1– ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ವ್ಯವಸ್ಥಿತ ಷಡ್ಯಂತ್ರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿದ ಬೃಹತ್‌ ಧರ್ಮಸ್ಥಳ ಚಲೋ ಅಭಿಯಾನವನ್ನು ನಡೆಸಲಾಯಿತು.

ಎಸ್‌‍ಐಟಿ ಬದಲಿಗೆ ರಾಜ್ಯ ಸರ್ಕಾರ ತಕ್ಷಣವೇ ಪ್ರಕರಣವನ್ನು ಎನ್‌ಐಎಗೆ ವಹಿಸಿ ಈ ಷಡ್ಯಂತ್ರ ಮಾಡಿರುವ ದುಷ್ಟಶಕ್ತಿಗಳನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ

ಉಗ್ರ ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಮಂಜುನಾಥಸ್ವಾಮಿ ಸನ್ನಿಧಿಗೆ ಹೊಂದಿಕೊಂಡಿರುವ ಮೈದಾನದಲ್ಲಿ ನಡೆದ ಧರ್ಮಸ್ಥಳ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ಹಿಂದೂ ಕಾರ್ಯಕರ್ತರಿಂದ ವ್ಯಕ್ತವಾಯಿತು.
ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಬೃಹತ್‌ ಸಂಖ್ಯೆಯ ಸಾವಿರಾರು ಕಾರ್ಯಕರ್ತರು ಧರ್ಮಸ್ಥಳದ ಪರವಾಗಿ ನಾವಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಮುನಿರತ್ನ, ಎಸ್‌‍.ಆರ್‌.ವಿಶ್ವನಾಥ್‌, ಮಾಜಿ ಸಚಿವರಾದ ಶ್ರೀರಾಮುಲು, ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್‌ ಸದಸ್ಯರು, ಮುಖಂಡರು ಸೇರಿದಂತೆ ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಮ ನೈತಿಕ ಬೆಂಬಲವನ್ನು ಸೂಚಿಸಿದರು.

ಎಸ್‌‍ಐಟಿ ತನಿಖೆ ಬಗ್ಗೆ ನನಗೆ ಯಾವುದೇ ರೀತಿಯ ಅನುಮಾನಗಳಿಲ್ಲ. ಆದರೆ ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳ ಕೈವಾಡ ಇರುವುದರಿಂದ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ವೇದಿಕೆಯಲ್ಲಿ ಮಾತನಾಡಿದ ಪ್ರಮುಖರು ಒತ್ತಾಯಿಸಿದರು.

ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯುವ ದುರುದ್ದೇಶದಿಂದಲೇ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ. ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಇದನ್ನು ಎನ್‌ಐಗೆ ವಹಿಸಿದರೆ ಮಾತ್ರ ನಿಜವಾದ ಸೂತ್ರಧಾರರು ಹೊರಬರಲಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಎಸ್‌‍ಐಟಿ ವಶದಲ್ಲಿರುವ ಚಿನ್ನಯ್ಯ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾನೆ. ಪ್ರಕರಣದ ಸೂತ್ರಧಾರಿಗಳು ಎನಿಸಿರುವ ಗಿರೀಶ್‌ ಮಟ್ಟಣ್ಣನವರ್‌, ಸುಜಾತ ಭಟ್‌, ಮಹೇಶ್‌ ಶೆಟ್ಟಿ ತಿಮರೋಡಿ, ಜಯಂತ್‌ ಸೇರಿದಂತೆ ಹಲವರು ಷಡ್ಯಂತ್ರ ನಡೆಸಿರುವುದು ತನಿಖೆಯಿಂದ ಹೊರಬಂದಿದೆ. ಇವರು ಮಾತ್ರವಲ್ಲದೆ ಇನ್ನು ಕೆಲವು ಎಡಪಂಥೀಯ ಚಿಂತಕರು ಸೇರಿದಂತೆ ಮತ್ತಿತರರು ಶಾಮೀಲಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸರ್ಕಾರ ಯಾವುದೇ ಪೂರ್ವಾಪರ ಇಲ್ಲದೆ ಎಸ್‌‍ಐಟಿಗೆ ವಹಿಸಿದೆ. ಇದೀಗ ಈ ಪ್ರಕರಣದ ಹಿಂದೆ ಯಾವೆಲ್ಲ ದುಷ್ಟಶಕ್ತಿಗಳು ಇವೆ ಎಂಬುದು ಆಚೆ ಬರುತ್ತಿದೆ. ಎಸ್‌‍ಐಟಿ ರಾಜ್ಯ ಸರ್ಕಾರದಡಿ ಕಾರ್ಯ ನಿರ್ವಹಿಸುವುದರಿಂದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

ನಮ ಹೋರಾಟ ಇಲ್ಲಿಗೆ ನಿಲುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ಬೃಹತ್‌ ಅಭಿಯಾನವನ್ನು ರೂಪಿಸಲಿದ್ದೇವೆ. ತಕ್ಷಣವೇ ಸರ್ಕಾರ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸದಿದ್ದರೆ ಮಂಜುನಾಥನ ಅವಕೃಪೆಗೆ ಒಳಗಾಗುತ್ತೀರಿ ಎಂದು ಬಹುತೇಕರು ಎಚ್ಚರಿಸಿದರು.

RELATED ARTICLES

Latest News