Monday, November 10, 2025
Homeರಾಜ್ಯನ.15 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ

ನ.15 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ

ಬೆಳ್ತಂಗಡಿ,ನ.10- ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ.15 ರಿಂದ 19ರ ವರೆಗೆ ನಡೆಯಲಿವೆ. ನ. 18 ರಂದು ಸಂಜೆ 5ರಿಂದ ಸರ್ವಧರ್ಮ ಸಮೇಳನದ 93ನೇ ಅಧಿವೇಶನ ನಡೆಯಲಿದೆ. ಕರ್ನಾಟಕ ಸರ್ಕಾರದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವ ಡಾ. ಬಿ.ಎಂ. ಪಾಟೀಲ್‌ ಸರ್ವಧರ್ಮ ಸಮೇಳನದ 93ನೇ ಅಧಿವೇಶನ ಉದ್ಘಾಟಿಸುವರು.

ಹರಿಹರಪುರದ ಸ್ವಯಂಪ್ರಕಾಶ್‌ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಎ. ಸೂರ್ಯಪ್ರಕಾಶ್‌ ಪಂಡಿತ್‌ ಮತ್ತು ಖ್ಯಾತ ಅಂಕಣಕಾರ ತನ್ವೀರ್‌ ಅಹಮದ್‌ ಉಲ್ಲಾ ಅವರು ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8.30 ರಿಂದ ಚೆನೈನ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ವಿದುಷಿ ಡಾ. ಶೀಲಾ ಉನ್ನಿಕೃಷ್ಣನ್‌ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನವಿದೆ.

ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ. ನ. 19 ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮೇಳನದ 93ನೇ ಅಧಿವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪೊ. ಪ್ರೀಮಶೇಖರ ಉದ್ಘಾಟಿಸುವರು. ಪತ್ರಕರ್ತ ವಿಶ್ವೇಶ್ವರ ಭಟ್‌ ಅಧ್ಯಕ್ಷತೆ ವಹಿಸುವರು. ಲೇಖಕಿ ಶಾಂತಾ ನಾಗಮಂಗಲ, ಪತ್ರಕರ್ತ ಡಾ. ರಘು ವಿ. ಮತ್ತು ಧಾರವಾಡದ ಸಾಹಿತಿ ಡಾ. ಬಿ.ಎಂ. ಶರಭೇಂದ್ರ ಸ್ವಾಮಿ ಅವರು ಉಪನ್ಯಾಸ ನೀಡುವರು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8.30 ರಿಂದ ಬೆಂಗಳೂರಿನ ರಾಹುಲ್‌ ವೆಲ್ಲಾಲ್‌ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವಿದೆ. ರಾತ್ರಿ ಗಂಟೆ 9.45 ರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ರಾತ್ರಿ 12 ಗಂಟೆ ಬಳಿಕ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ. ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿದ್ದು, ನ. 20 ರ ಬೆಳಗ್ಗಿನ ಜಾವ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾರೋಪಗೋಳ್ಳಲಿದೆ.

ರಾಜ್ಯದ ವಿವಿಧ ಭಾಗಗಳಿಂದ ಚೆಂಡೆ, ಕೊಂಬು, ಕಹಳೆ, ವಾಲಗ, ನಾಗಸ್ವರ ಮೊದಲಾದ ಸಾವಿರಾರು ಕಲಾವಿದರು ರಾತ್ರಿ ಇಡೀ ಕಲಾಸೇವೆ ಮಾಡುವರು. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ಕೆಎಸ್‌‍ಆರ್‌ಟಿಸಿ ವಿಶೇಷ ಬಸ್‌‍ ಸೌಲಭ್ಯ ಕಲ್ಪಿಸಿದೆ.

RELATED ARTICLES

Latest News