ಬೆಳ್ತಂಗಡಿ,ಜ.24-ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬವಾಗಿದ್ದು,ರಾಷ್ಟಪಿತ ಮಹಾತ್ಮಾಗಾಂಧೀಜಿ ಗ್ರಾಮರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಸಹಕಾರಿ ಚಳವಳಿ ಮೂಲಕ ದೇಶದ ಪ್ರಗತಿಗೆ ಆದ್ಯತೆ ನೀಡಿದರು.
ಮಾನವ ಸಂಪನ್ಮೂಲ ಹಾಗೂ ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದ ಪ್ರಗತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ ಆಗಮಿಸಿದ 38 ಮಂದಿ ಲಂಕಾ ಮೈಕ್ರೋ ಪೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಶನ್ ಸದಸ್ಯರಿಗೆ ಮಾಹಿತಿ ನೀಡಿದರು.ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶವಿದೆ. ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಪ್ರಗತಿಯ ಪಾಲುದಾರರು.
ಜನರ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವದಿಂದ ಯೋಜನೆ ಯಶಸ್ವಿಯಾಗಿದೆ ಎಂದರು. ಜನಸಾಮಾನ್ಯರ ಬೇಡಿಕೆಗಳಿಗೆ ಅನುಗುಣವಾಗಿ ಕಿರು ಆರ್ಥಿಕ ಯೋಜನೆಯನ್ನು ಸ್ವ-ಸಹಾಯ ಸಂಘಗಳ ಮೂಲಕ ಬಿ.ಸಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಪ್ರಗತಿಗೆ ಕೊನೆಯಿಲ್ಲ. ಇಂದು ಗ್ರಾಮೀಣ ಜನರ ಜೀವನಶೈಲಿ ಸುಧಾರಣೆಯಾಗಿದೆ. ಅವರ ಮಕ್ಕಳೆಲ್ಲ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.ಯೋಜನೆಯ ಎಲ್ಲಾ ವ್ಯವಹಾರಗಳು. ಕಾರ್ಯಕ್ರಮಗಳು ಪಾರದರ್ಶಕವಾಗಿದ್ದು ಯಾರು ಬೇಕಾದರೂ ಇದನ್ನು ಅನುಸರಿಸಬಹುದು ಎಂದು ಹೇಳಿದರು.
ಶ್ರೀಲಂಕಾದಲ್ಲಿ ಯೋಜನೆಯ ಮಾದರಿ ಅನುಷ್ಠಾನಗೊಳಿಸಲು ತಮ ಪೂರ್ಣ ಒಪ್ಪಿಗೆ ಇದೆ. ಬೇಕಾದ ಎಲ್ಲಾ ಮಾಹಿತಿ, ಅನುಭವ, ಮಾರ್ಗದರ್ಶನ ನೀಡಲಾಗುವುದು. ಶ್ರೀಲಂಕಾ ಸಣ್ಣ ದೇಶವಾದುದರಿಂದ ಅಲ್ಲಿ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಜ್ಞಾನದೀಪ ಮತ್ತು ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರವಾಗಿದೆ ಎಂದರು.
ಅವರು ಕೂಡಾ ವ್ಯವಹಾರ ಪರಿಣತರಾಗಿ, ಜನಪ್ರತಿನಿಧಿಗಳಾಗಿ ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.ಲಂಕಾ ಮೈಕ್ರೋ ಪೈನಾನ್‌್ಸ ಪ್ರಾಕ್ಟೀಶನರ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಸಂತ ಗುಣವರ್ಧನ ಮಾತನಾಡಿ, ಧರ್ಮಸ್ಥಳದ ಯೋಜನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಶ್ರೀಲಂಕಾದಲ್ಲಿ ಇದೇ ಮಾದರಿ ಅನುಷ್ಠಾನಗೊಳಿಸಲು ಹೆಗ್ಗಡೆಯವರ ಅನುಮತಿ ಕೋರಿದರು. ಹೆಗ್ಗಡೆಯವರು ಸಂತೋಷದಿಂದ ಒಪ್ಪಿಗೆ ನೀಡಿ ಎಲ್ಲಾ ರೀತಿಯ ಸಹಕಾರ, ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.
ಶ್ರೀಲಂಕಾದ ಡೆಗಿರಿ ದುಲಾಂಗ ಚಮೀರ, ಮಿಥಿರಾಮ್ ಚಾಮಿಕ ಮಲ್ಕಾಂತಿ ರಾಣಸಿಂಘ, ಕನಗರತ್ನಂ ಲಕ್ಷ್ಮಣ್ ಈರಜ್, ಎಸ್.ಪಿ. ಬೆನಿತಾಸ್, ರಾಮಸಾಮಿ ರಾಜೇಶ್ಖನ್ನಾ ಮಾತನಾಡಿ ಧರ್ಮಸ್ಥಳದ ಶಿಸ್ತು, ಆಡಳಿತ ವ್ಯವಸ್ಥೆ, ಆತಿಥ್ಯ, ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕ ಮಾತುಗಳೊಂದಿಗೆ ಯೋಜನೆಯ ಕಾರ್ಯವೈಖರಿಯ ಪಕ್ಷಿನೋಟ ನೀಡಿದರು.ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಪೈ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ನಿರ್ದೇಶಕ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.