ಧಾರವಾಡ,ಅ.13– ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಎಂಟು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ ಗದಗ ಹುಡ್ಕೋ ಕಾಲೋನಿಯ ಮಹಾಂತಮ ಬಸವಣೆಪ್ಪ ತುಪ್ಪದ (85) ಮತ್ತು ಸುರೇಶ ಬಸವಣೆಪ್ಪ ತುಪ್ಪದ (52)ಮೃತಪಟ್ಟಿದ್ದಾರೆ.ಗದಗ ಮೂಲದ ಕುಟುಂಬವು ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದ್ದು, ಅವರೆಲ್ಲರೂ ದೇವಿ ದರ್ಶನ ಪಡೆದು ತಮ ಊರಿಗೆ ಕ್ರೂಸರ್ ವಾಹನದಲ್ಲಿ ಹಿಂದಿರುಗುತ್ತಿದ್ದರು.
ಇಂದು ಮುಂಜಾನೆ 5.30 ರ ಸುಮಾರಿನಲ್ಲಿ ಈ ಕ್ರೂಸರ್ ವಾಹನ ಧಾರವಾಡ ತಾಲ್ಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮುಲ್ಲಾ ಡಾಬಾ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ.ಅಪಘಾತದ ರಭಸಕ್ಕೆ ಕ್ರೂಸರ್ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ವಾಹನದೊಳಗಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಗಾಯಗೊಂಡಿದ್ದ ಎಂಟು ಮಂದಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.