ಬೆಂಗಳೂರು,ಮಾ.18- ವಜ್ರದ ಹರಳುಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೈದರಾಬಾದ್‍ನಿಂದ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡು ನಕಲಿ ವಜ್ರದ ಹರಳುಗಳನ್ನು ಅಸಲಿ ಎಂದು ನಂಬಿಸಿ ಕೋಟ್ಯಂತರ ಹಣ ಲಪಟಾಯಿಸಲು ಯತ್ನಿಸಿರುವ ನಾಲ್ವರ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಹೈದರಾಬಾದ್ ಮೂಲದ ಲಕ್ಷ್ಮಿನಾರಾಯಣ ಎಂಬುವರಿಗೆ ರವಿ ಎಂಬಾ ವಾಟ್ಸಪ್ ಕರೆ ಮಾಡಿ ವ್ಯವಹಾರದ ಸಂಬಂಧ ಬೆಂಗಳೂರಿನ ಏರ್ಪೋರ್ಟ್‍ನಲ್ಲಿನ ತಾಜ್ ಹೋಟೆಲ್‍ಗೆ ಬರುವಂತೆ ತಿಳಿಸಿದ್ದಾನೆ. ಅದರಂತೆ ಲಕ್ಷ್ಮಿನಾರಾಯಣ ಅವರು ಮಾ.15ರಂದು ಬೆಳಗ್ಗೆ 11.30 ಸುಮಾರಿಗೆ ಹೈದರಾಬಾದ್‍ನಿಂದ ಸ್ನೇಹಿತರಾದ ನಾಗೇಂದ್ರ ಮತ್ತು ರಾಮ್‍ಕುಮಾರ್ ಜೊತೆ ಬಂದಿದ್ದಾರೆ.
ಹೋಟೆಲ್‍ನ ಲಾಬಿಯಲ್ಲಿ ಈ ಮೂವರು ಕುಳಿತಿದ್ದಾಗ ರವಿ ಅಲ್ಲಿಗೆ ಬಂದಿದ್ದು, ತನ್ನೊಂದಿಗಿದ್ದ ನವೀನ್‍ಕುಮಾರ್, ಗೂರ್ ಅಹಮ್ಮದ್, ಅಬ್ದುಲ್ ದಸ್ತಗೀರ್ ಎಂದು ಪರಿಚಿಯಿಸಿ ಇವರು ವಜ್ರದ ವ್ಯವಹಾರ ಮಾಡುತ್ತಿರುವುದಾಗಿ ಹೇಳಿದ್ದಾನೆ. ನಂತರ ತನ್ನ ಬಳಿಯಿದ್ದ ಬ್ಯಾಗ್‍ನಿಂದ 10 ಒಡವೆ ಬಾಕ್ಸ್‍ಗಳನ್ನು ಒಂದೊಂದಾಗಿ ತೆಗೆದು ತೋರಿಸಿ ಇವು ವಜ್ರದ ಹರಳುಗಳು, ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ರೂ.ಗಳಾಗುತ್ತದೆ ಎಂದು ತಿಳಿಸಿದ್ದಾನೆ.
ತೆಲಂಗಾಣ ರಾಜ್ಯಪಾಲೆ ತಮಿಳುಸಾಯಿ ಸೌಂದರರಾಜನ್ ರಾಜೀನಾಮೆ
ಆ ಹರಳುಗಳನ್ನು ಯಾವುದೋ ಎರಡು ಮೆಷಿನ್‍ಗಳಿಂದ ಪರಿಶೀಲಿಸಿದವರಂತೆ ನಟಿಸಿ ಅವುಗಳು ಅಸಲಿ ಎಂದು ಲಕ್ಷಿನಾರಾಯಣ ಅವರನ್ನು ನಂಬಿಸಲು ಯತ್ನಿಸಿದ್ದಾರೆ. ನೀವು ಈ ಹರಳುಗಳನ್ನು ಖರೀದಿಸಲು ಒಪ್ಪಿದರೆ 1ರಿಂದ 3 ಕೋಟಿ ರೂ. ಕಡಿಮೆ ಬೆಲೆಗೆ ಕೊಡುವುದಾಗಿ ತಿಳಿಸಿದ್ದಾರೆ. ಲಕ್ಷ್ಮಿನಾರಾಯ ಅವರಿಗೆ ಹರಳುಗಳ ಬಗ್ಗೆ ಅನುಮಾನ ಬಂದು ಖುದ್ದು ತಮ್ಮ ಜೊತೆಯಲ್ಲಿದ್ದ ಸ್ನೇಹಿತರೊಂದಿಗೆ ಪರೀಕ್ಷಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ.
ತಕ್ಷಣ ಲಕ್ಷ್ಮಿನಾರಾಯಣ ಅವರು ತಮ್ಮ ಸ್ನೇಹಿತರೊಂದಿಗೆ ಅಲ್ಲಿಂದ ತೆರಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ಬಂದು ನಕಲಿ ವಜ್ರದ ಹರಳುಗಳನ್ನು ಅಸಲಿ ಎಂದು ತಮಗೆ ತೋರಿಸಿ ಹಣ ಲಪಟಾಯಿಸಲು ಯತ್ನಿಸಿದ ರವಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.