Wednesday, July 30, 2025
Homeರಾಷ್ಟ್ರೀಯ | Nationalಸಿಎಂ - ಡಿಸಿಎಂ ನಡುವೆ ಏನೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿಯಾದ 'ಮೀಟಿಂಗ್'

ಸಿಎಂ – ಡಿಸಿಎಂ ನಡುವೆ ಏನೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿಯಾದ ‘ಮೀಟಿಂಗ್’

Did CM Siddaramaiah propose to hold a meeting with MLAs excluding DCM DK Shivakumar

ಬೆಂಗಳೂರು, ಜು. 29- ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯವರ ನಡುವೆ ಹೊಂದಾಣಿಕೆಯ ಕೊರತೆ ಇದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರವರನ್ನು ಹೊರಗಿಟ್ಟು ಶಾಸಕರ ಜೊತೆ ಸಮಾಲೋಚನೆ ಸಭೆ ನಡೆಸಲು ಮುಂದಾಗಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಡಿ.ಕೆ.ಶಿವಕುಮಾರ್‌ ಅವರು ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌‍ಎಸ್‌‍ಬಿ ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ್ದಾರೆ.ಶಾಸಕರಿಗೆ ತಲಾ 50 ಕೋಟಿ ರೂ.ಗಳ ಅನುದಾನ ನೀಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಯೊಬ್ಬ ಶಾಸಕರ ಜೊತೆಗೂ ಸಮಾಲೋಚನೆ ನಡೆಸಲು ಇಂದಿನಿಂದ ಮೂರು ದಿನಗಳ ಕಾಲ ನಿರಂತರವಾಗಿ ಸಭೆ ನಡೆಸಲಿದ್ದು, ಆ.7 ರಂದು ಮತ್ತೊಂದು ಸುತ್ತಿನ ಸಭೆ ಕರೆದಿದ್ದಾರೆ.

ಆದರೆ ಈ ಸಭೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆಹ್ವಾನ ಇಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಡಿ.ಕೆ.ಶಿವಕುಮಾರ್‌ ಅವರು ಉಸ್ತುವಾರಿ ವಹಿಸುತ್ತಿರುವ ಬೆಂಗಳೂರಿನ ಶಾಸಕರ ಸಭೆಗೂ ಮುಖ್ಯಮಂತ್ರಿಯವರ ಕಚೇರಿ ಸಮಯ ನಿಗದಿ ಮಾಡದೇ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಡಿ.ಕೆ.ಶಿವಕುಮಾರ್‌ ಅವರಿಗೆ ಡೆಂಗ್ಯೂ ಜ್ವರ ಇದೆ. ಆರೋಗ್ಯದ ಸಮಸ್ಯೆಯಿಂದ ಅವರು ಸಭೆಯಿಂದ ದೂರ ಉಳಿದಿದ್ದಾರೆ ಎಂಬ ಸಮರ್ಥನೆಗಳನ್ನು ಪಕ್ಷದ ಕೆಲ ಸಚಿವರು ನೀಡಿದ್ದರು. ಈ ರೀತಿ ಹೇಳಿಕೆಗಳು ಹೊರಬಂದ ಎರಡೇ ಗಂಟೆಗಳಲ್ಲಿ ಡಿ.ಕೆ.ಶಿವಕುಮಾರ್‌ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾಧ್ಯಮದವರ ಜೊತೆ ಮಾತನಾಡಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಿದರು.

ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮಗೆ ಆರೋಗ್ಯದ ಸಮಸ್ಯೆ ಇಲ್ಲ ಎಂಬ ಸಂದೇಶ ರವಾನೆ ಮಾಡಿದರು. ಆರೋಗ್ಯವಾಗಿ ಕ್ರಿಯಾತಕ ಚಟುವಟಿಕೆಯಲ್ಲಿದ್ದರೂ ಮುಖ್ಯಮಂತ್ರಿಯವರು ಡಿ.ಕೆ.ಶಿವಕುಮಾರ್‌ ಅವರನ್ನು ಸಭೆಯಿಂದ ದೂರ ಇಟ್ಟಿದ್ದೇಕೆ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್‌, ನನಗೇ ಕಷ್ಟವಾಗಿಲ್ಲ, ನಿಮಗೇಕೆ ಆ ಚಿಂತೆ? ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಶಾಸಕರ ಜೊತೆ ಸಭೆ ಮಾಡಿ ಸಮಸ್ಯೆಗಳನ್ನು ಕೇಳಿದ್ದರು .ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಭೆ ನಡೆಸುವಂತೆ ಹೇಳಿರಬಹುದು. ಹೀಗಾಗಿ ಮುಖ್ಯಮಂತ್ರಿಯವರು ತಮಗಿರುವ ಅಧಿಕಾರವನ್ನು ಬಳಕೆ ಮಾಡಿಕೊಂಡು ಶಾಸಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಶಾಸಕರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದರು.
ಬೆಂಗಳೂರಿನ ಸಮಸ್ಯೆಗಳು ಪ್ರತ್ಯೇಕವಾಗಿವೆ. ಅವುಗಳನ್ನು ಬಗೆಹರಿಸಲು ಭಾರೀ ಪ್ರಮಾಣದ ಹಣಕಾಸಿನ ವ್ಯವಸ್ಥೆ ಆಗಬೇಕು. ಹೀಗಾಗಿ ನಾನು ಬೆಂಗಳೂರಿನ ಶಾಸಕರು ಹಾಗೂ ವಿವಿಧ ಸಂಸ್ಥೆಗಳ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದಿದ್ದಾರೆ.

ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಸಭೆ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಸೀಮಿತವಾಗಿತ್ತು ಎಂಬ ವ್ಯಾಖ್ಯಾನಗಳಿದ್ದವು. ಆ ವೇಳೆ ನಾಯಕತ್ವದ ಬದಲಾವಣೆಯ ಬಗ್ಗೆ ಸುರ್ಜೇವಾಲ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆ ರೀತಿಯ ಯಾವ ಅಭಿಪ್ರಾಯಗಳನ್ನೂ ತಾವು ಸಂಗ್ರಸಿಲ್ಲ ಎಂದು ಸುರ್ಜೇವಾಲ ಹೇಳಿದರು.

ಆದರೆ ಸಿದ್ದರಾಮಯ್ಯನವರು ದೆಹಲಿಯಲ್ಲಿ ಕುಳಿತು ಮುಂದಿನ ಎರಡೂವರೆ ವರ್ಷಗಳವರೆಗೂ ತಾವೇ ಮುಖ್ಯಮಂತ್ರಿ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕರ ಸಂಖ್ಯಾಬಲವಿಲ್ಲ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಅನಂತರ ಮೈಸೂರಿನಲ್ಲಿ ನಡೆದ ಕಾಂಗ್ರೆಸ್‌‍ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರ ಹೆಸರು ಹೇಳಲು ಹಿಂದೇಟು ಹಾಕುವ ಮೂಲಕ ಬಹಿರಂಗವಾಗಿಯೇ ಅಪಮಾನ ಮಾಡಿದ್ದರು. ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಹೇಳಿದ್ದು, ಬಹಿರಂಗ ಸಮಾವೇಶದಲ್ಲಿ ಹೆಸರು ಹೇಳಲೂ ಕೂಡ ಹಿಂದೇಟು ಹಾಕಿದ್ದು ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿತ್ತು.

ಬಹುಷಃ ಇದಕ್ಕೆ ಡಿ.ಕೆ.ಶಿವಕುಮಾರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಬಹುದು ಎಂಬ ಲೆಕ್ಕಾಚಾರಗಳು ತಲೆಕೆಳಗಾದವು. ಡಿಕೆಶಿ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತಾಳೆಯಿಂದ ವರ್ತಿಸಿದರು. ಸಿದ್ದರಾಮಯ್ಯನವರ ಜೊತೆಯಲ್ಲೇ ನಿಂತು ಕಾರ್ಯಕ್ರಮಗಳಿಗೆ ಕೈ ಜೋಡಿಸಿದರು. ಇಷ್ಟೆಲ್ಲಾ ಆದ ಬಳಿಕ ಶಾಸಕರ ಸಭೆಗೆ ಡಿಕೆಶಿಯವರನ್ನು ಆಹ್ವಾನಿಸದೆ ಸಿದ್ದರಾಮಯ್ಯನವರಷ್ಟೇ ಚರ್ಚೆ ನಡೆಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸೆಪ್ಟಂಬರ್‌ ವೇಳೆಗೆ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಚರ್ಚೆಗಳಿದ್ದವು. ಅದಕ್ಕಾಗಿ ಸಿದ್ದರಾಮಯ್ಯ ಶಾಸಕರ ಜೊತೆ ಪ್ರತ್ಯೇಕ ಸಮಾಲೋಚನೆ ಮೂಲಕ ತಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರಬಹುದು. ಹೀಗಾಗಿ ಹಳೆ ಮೈಸೂರು ಭಾಗದ ಶಾಸಕರ ಸಭೆಗೆ ಡಿಕೆಶಿಯವರನ್ನು ದೂರವಿಟ್ಟಿರಬಹುದು ಎಂಬ ಆಕ್ಷೇಪಗಳು ಕೇಳಿಬಂದಿವೆ.ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನಿಸಿದರೂ ಪ್ರಮುಖ ನಾಯಕರುಗಳ ನಡುವಿನ ವ್ಯತ್ಯಾಸಗಳು ತಾನಾಗಿಯೇ ಬಹಿರಂಗಗೊಳ್ಳುತ್ತಿವೆ.

RELATED ARTICLES

Latest News