ಬೆಂಗಳೂರು,ನ.3- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಿಎಫ್‌ಐ ಮತ್ತು ಎಸ್‌ಡಿಪಿಐಯಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸುವಂತೆ ಎಂದಾದರೂ ಕೇಳಿದ್ದಾರೆಯೇ? ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ರಾಷ್ಟೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವನ್ನು ನಿಷೇಧಿಸಬೇಕೆಂಬ ಮಲ್ಲಿಕಾರ್ಜುನ ಖರ್ಗೆ ಅವರ ಅಸಂಬದ್ಧ ಹೇಳಿಕೆ ತೀವ್ರ ಖಂಡನೀಯ. ಪಿಎಫ್‌ಐ ಮತ್ತು ಎಸ್‌ಡಿಪಿಐಯಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸುವಂತೆ ಎಂದಾದರೂ ಅವರು ಕೇಳಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ನೂರಾರು ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ. ಕರಾವಳಿ ಕರ್ನಾಟಕ ಮತ್ತು ಕೇರಳ ಎರಡರಲ್ಲೂ ನೂರಾರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದರಲ್ಲಿ ಪಿಎಫ್‌ಐ ಕೈವಾಡವಿದೆ ಎಂಬ ಆರೋಪವಿದೆ.
ಪಿಎಫ್‌ಐ ಮತ್ತು ಎಸ್‌ಡಿಪಿಐ ವಿಷಯ ಬಂದಾಗ, ಖರ್ಗೆ ಅವರಿಂದ ಹಿಡಿದು ಕೆಳಹಂತದವರೆಗಿನ ಕಾಂಗ್ರೆಸಿಗರು ಹಿಂದೆ ಸರಿಯುತ್ತಾರೆ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿನ ಪೊಲೀಸ್ ಠಾಣೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಕೃತ್ಯದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಮಾಜಘಾತುಕ ಶಕ್ತಿಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿರುವುದನ್ನು ಇಡೀ ಜಗತ್ತು ಕಂಡಿದೆ. ಈ ಕಾಂಗ್ರೇಸ್ ಸರ್ಕಾರ ಸ್ಪಷ್ಟವಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಖಂಡಿಸುವ ಧೈರ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗಿದೆಯೇ? ಎಂದು ತರಾಟೆ ೆತೆಗೆದುಕೊಂಡಿದ್ದಾರೆ.
ಕಳೆದ 100 ವರ್ಷಗಳಿಂದ ರಾಷ್ಟ್ರೀಯ ಏಕತೆ, ಸಮಗ್ರತೆ, ಸಾಂಸ್ಕೃತಿಕ ಪುನರುಜ್ಜೀವನ, ಸಮಾಜಸೇವೆ ಮತ್ತು ಸಾಮಾಜಿಕ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಅನ್ನು ನಿಷೇಧಿಸುವಂತೆ ಖರ್ಗೆ ಆಗ್ರಹ ಕೇವಲ ವಿಪರ್ಯಾಸ ಮಾತ್ರವಲ್ಲ, ಇದು ಸತ್ಯದ ತಿರುಚುವಿಕೆಯೂ ಆಗಿದೆ. ಆರ್‌ಎಸ್‌ಎಸ್ ಇಡೀ ದೇಶದ ಜನರಿಂದ ಗೌರವ, ವಿಶ್ವಾಸಾರ್ಹತೆ ಮತ್ತು ಸ್ವೀಕಾರಾರ್ಹತೆಯನ್ನು ಗಳಿಸಿದೆ. ಜನರ ಬೆಂಬಲವಿಲ್ಲದೆ ಆರ್‌ಎಸ್‌ಎಸ್ ಹೇಗೆ ಆಲದ ಮರದಂತೆ ಬೆಳೆಯಲು ಸಾಧ್ಯ? ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಹಿಂದೆಯೂ ಮೂರು ಬಾರಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿತ್ತು ಎಂಬುದನ್ನು ಖರ್ಗೆ ಅರ್ಥಮಾಡಿಕೊಳ್ಳಬೇಕು. ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅದೇ ಕಾಂಗ್ರೆಸ್ ಸರ್ಕಾರವು ನಿಷೇಧವನ್ನು ಬೇಷರತ್ತಾಗಿ ತೆರವುಗೊಳಿಸಬೇಕಾಯಿತು ಎಂದು ರವಿಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
