ಬೆಂಗಳೂರು, ಏ.30- ಪತಂಜಲಿ ಸಂಸ್ಥೆ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆ ನಡೆಸಲು ಮುಂದಾದಾಗ ವಿರೋಧ ವ್ಯಕ್ತ ಪಡಿಸಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಈಗ ಉತ್ತರಾಖಂಡ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಏನು ಹೇಳುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಉತ್ತರಕಾಂಡದ ಬಿಜೆಪಿ ಸರ್ಕಾರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ. ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಪತಂಜಲಿ ಸಂಸ್ಥೆ ಮೇಲೆ ದ್ವೇಷ ಯಾಕೆ ಎಂದು ನನ್ನನ್ನು ಪ್ರಶ್ನಿಸಿದ್ದರು.
ಈಗ ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಉತ್ತರಕಾಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನೇ ರದ್ದು ಮಾಡಿದೆ. ಈಗ ಅಶೋಕ್ರವರು ನನಗೆ ಕೇಳಿದ್ದ ಪ್ರಶ್ನೆಯನ್ನು ಉತ್ತರಕಾಂಡ ಸರ್ಕಾರಕ್ಕೂ ಕೇಳುತ್ತಾರೆಯೇ ಎಂದು ತಿರುಗೇಟು ನೀಡಿದ್ದಾರೆ. ಸುಳ್ಳು ಜಾಹೀರಾತು ನೀಡಿ ಜನರಿಗೆ ವಂಚಿಸಿದ್ದ ಬಾಬುರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಪತಂಜಲಿ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಸರ್ವೋಚ್ಚ ನ್ಯಾಯಾಲಯವೇ ಪತಂಜಲಿ ಸಂಸ್ಥೆಯ ವಿಶ್ವಾಸರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಗ ವಿಪಕ್ಷ ನಾಯಕ ಆರ್.ಅಶೋಕ್ ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸುವುದೇ ಅಪರಾಧವೆಂಬಂತೆ ವರ್ತಿಸಿದ್ದರು. ಈಗ ಅವರ ಪಕ್ಷದ ನೇತೃತ್ವದ ಉತ್ತರಕಾಂಡ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಶ್ನಿಸುವ ತಾತ್ತು ಅಶೋಕ್ ಅವರಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ದಿನೇಶ್ ಗುಂಡೂರಾವ್, ಕಮಲ ಪಾಳೆಯದವರೇ ಯಾರು ಡೇಂಜರ್, ನಿಮ್ಮ ಕಮಲ ದಳದಲ್ಲೇ ಇದೆ ಡೇಂಜರ್ ! ಕಣ್ಮುಂದೆ ಕಿರಾತಕ ಕೃತ್ಯಗಳನ್ನ ಕಂಡೂ, ಕಣ್ಣಾ ಮುಚ್ಚಾಲೆ ಆಡಿದ ನೀವು ಡೇಂಜರ್ ಎಂದು ಹಾಸನದ ಪೆನ್‌ಡ್ರೈವ್ ಪ್ರಕರಣ ಕುರಿತು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತಾಡುವ ಮೋದಿಯವರೇ.. ಹುಬ್ಬಳ್ಳಿಯ ಹೆಣ್ಣುಮಗಳ ಹತ್ಯೆಗೆ ಅಬ್ಬರಿಸಿದಷ್ಟು, ಹಾಸನದ ಹೆಣ್ಣುಮಕ್ಕಳಿಗಾದ ಅನ್ಯಾಯಗಳ ಬಗ್ಗೆ ಏಕೆ ಅರ್ಭಟಿಸಲಿಲ್ಲ. ಯಾರಿಗೆ ಆಶೀರ್ವದಿಸಿ ಎಂದು ಕೇಳಿದ್ದಿರೋ, ಅವರ ಅಶ್ಲೀಲದ ಬಗ್ಗೆ ನಿಮಗೆ ಮೊದಲೇ ತಿಳಿಸಿದ್ದರಂತಲ್ಲ.. ಆದರೂ, ನಿಮ್ಮ ಮಡಿಲಲ್ಲಿಟ್ಟುಕೊಂಡು ಮತ ಕೇಳಲು ಅಸಹ್ಯ ಎನಿಸಲಿಲ್ಲವೇ. ದುಷ್ಕೃತ್ಯಗಳನ್ನ ನಡೆಸಿದ ವ್ಯಕ್ತಿಯನ್ನು ನಿಮ್ಮ ಪಕ್ಷ ಜೊತೆಗಿಟ್ಟುಕೊಂಡಿರುವುದು ದುರಂತವೇ ಸರಿ. ಕನ್ಯೆಯರ ಕಣ್ಣೀರಿಗೆ ಬೆಲೆ ಕೊಡದ ಕಮಂಗಿಗಳಿಗೆ ಕಮಲದಳ ರಾಜಕೀಯ ದಾಳವಾಗದಿರಲಿ ಎಂದು ಹೇಳಿದ್ದಾರೆ.