Friday, November 22, 2024
Homeರಾಜ್ಯರದ್ದಾಗುತ್ತಾ ಸಂಸದ ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌‍ಪೋರ್ಟ್..?

ರದ್ದಾಗುತ್ತಾ ಸಂಸದ ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌‍ಪೋರ್ಟ್..?

ಬೆಂಗಳೂರು, ಮೇ 22- ಹಾಸನ ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ಅನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಕೇವಲ ಟೀಕೆ, ಟಿಪ್ಪಣಿಗಳನ್ನು ಮಾಡಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಸ್ಥಳೀಯ ನ್ಯಾಯಾಲಯ ಜಾಮೀನುರಹಿತ ಬಂಧನ ಆದೇಶ ಹೊರಡಿಸಿದ ಬಳಿಕ ಅದನ್ನು ಆಧಾರವಾಗಿಟ್ಟುಕೊಂಡು ಎಸ್‌‍ಐಟಿ ಮುಖ್ಯಸ್ಥರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದಿಂದ ವಾರಂಟ್‌ ಜಾರಿಯಾದ ಮೇಲೆ ಡಿಪ್ಲೊಮೇಟಿಕ್‌ ಪಾಸ್‌‍ ಅನ್ನು ರದ್ದು ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕೃತವಾದ ಮಾದರಿಯಲ್ಲೇ ಪತ್ರ ಬರೆಯಲಾಗಿದೆ. ಇದು ಪ್ರಜ್ವಲ್‌ ರೇವಣ್ಣ ಅವರಿಗೆ ಸೀಮಿತವಾಗುವ ವಿಷಯವಲ್ಲ. ಕಾನೂನಿಗೆ ಸಂಬಂಧಪಟ್ಟ ವಿಚಾರ. ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ಸಹಕಾರ ನೀಡಬೇಕು. ಕಾನೂನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಯೊಂದು ವಿಚಾರಕ್ಕೂ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬ ಮನೋಭಾವನೆಯನ್ನು ಕುಮಾರಸ್ವಾಮಿ ಹೊಂದಿರುವಂತೆ ಕಂಡುಬರುತ್ತಿದೆ ಎಂದು ಆಕ್ಷೇಪಿಸಿದರು.

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಬಿಜೆಪಿಯವರು ತಮ ವಿರುದ್ಧ ಟೀಕೆ ಮಾಡಿ ರಾಜೀನಾಮೆ ಕೇಳುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರು ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಪರಮೇಶ್ವರ್‌ ಹೇಳಿದರು.

ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕೆಂದು ಹಲವು ವರ್ಷಗಳಿಂದಲೂ ನಮ ಪಕ್ಷ ಒತ್ತಾಯ ಮಾಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ಮೆರಿಟ್‌ ವಿಷಯದಲ್ಲಿ ರಾಜಿಯಾಗುವ ಅಗತ್ಯವಿಲ್ಲ. ಗುಣಮಟ್ಟ ಪಾಲನೆ ಮುಖ್ಯ ಎಂಬುದು ನಮ್ಮ ನಿಲುವು. ಈಗ ರಾಜ್ಯಸರ್ಕಾರ ಹೊರಗುತ್ತಿಗೆಯಲ್ಲಿ ರೋಸ್ಟರ್‌ ಪದ್ಧತಿಯಂತೆ ಮೀಸಲಾತಿ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ.

ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿನ ಪ್ರಕರಣ ಯಾವಾಗ ಬೇಕಾದರೂ ಇತ್ಯರ್ಥಗೊಳ್ಳಬಹುದು. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ರಾಜ್ಯ ಚುನಾವಣಾ ಆಯೋಗ ಕೂಡ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆ ಮಾಡಬಹುದು. ಹೀಗಾಗಿ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ ಎಂದರು.

ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳಿಲ್ಲದೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ ಎಂಬ ಆಕ್ಷೇಪಗಳನ್ನು ರಾಜ್ಯಸರ್ಕಾರ ಪರಿಗಣಿಸಲಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಹೈಕಮಾಂಡ್‌ ಬಯಸಿದ್ದಾದರೆ ಆ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

RELATED ARTICLES

Latest News