ಬೆಂಗಳೂರು, ಸೆ.24– ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ನೇರ ವಿಮಾನ ಸೇವೆಯನ್ನು ಸ್ಪೈಸ್ ಜೆಟ್ ಪರಿಚಯಿಸಲಿದ್ದು, ಅ.10 ರಿಂದ ಆರಂಭವಾಗಲಿವೆ. ವಿಮಾನ ಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.
ಈ ಬಗ್ಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೂಡ ಎಕ್ಸ್ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ಚವಿಮಾನ ಆಗಮನ, ನಿರ್ಗಮನ ಸಮಯ ಮತ್ತಿತರ ವಿವರಗಳನ್ನು ನೀಡಿದ್ದಾರೆ. ಶಿವಮೊಗ್ಗಕ್ಕೆ ಮತ್ತೊಂದು ಮಹತ್ವದ ಸುದ್ದಿ! ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದಿಂದ ಎರಡು ಹೊಸ ವಿಮಾನ ಮಾರ್ಗಗಳನ್ನು ಸೇವೆಗೆ ಸೇರಿಸಲಿದೆ.
ಅ.10ರಿಂದ ಪ್ರಾರಂಭವಾಗುವಂತೆ ಚೆನ್ನೈ ಮತ್ತು ಹೈದರಾಬಾದ್‌ಗೆ ನೇರ ವಿಮಾನಯಾನ ಸೇವೆ ದೊರೆಯಲಿದೆ ಎಂದು ರಾಘವೇಂದ್ರ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಸ್ಪೈಸ್ ಜೆಟ್ ವಿಮಾನ ಚೆನ್ನೈನಿಂದ ಪ್ರತಿದಿನ ಬೆಳಿಗ್ಗೆ 10.40 ಕ್ಕೆ ಹೊರಟು ಮಧ್ಯಾಹ್ನ 12.10 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುವ ವಿಮಾನಗಳು ಮಧ್ಯಾಹ್ನ 12.35 ಕ್ಕೆ ಹೊರಡಲಿದ್ದು, 2.05 ಕ್ಕೆ ಹೈದರಾಬಾದ್ ತಲುಪಲಿವೆ.
ಹೈದರಾಬಾದ್‌ನಿಂದ ಹಿಂತಿರುಗುವ ವಿಮಾನ ಮಧ್ಯಾಹ್ನ 2.40 ಕ್ಕೆ ಹೊರಡಲಿದ್ದು, ಸಂಜೆ 4.10 ಕ್ಕೆ ಶಿವಮೊಗ್ಗ ತಲುಪಲಿದೆ. ಚೆನ್ನೈಗೆ ತೆರಳುವ ವಿಮಾನ ಶಿವಮೊಗ್ಗದಿಂದ ಸಂಜೆ 4.25ಕ್ಕೆ ಹೊರಟು 5.55ಕ್ಕೆ ಚೆನ್ನೈ ತಲುಪಲಿದೆ.
ಈ ಹೊಸ ವಿಮಾನ ಸೇವೆ ಶಿವಮೊಗ್ಗದ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗಕ್ಕೆ ಸೇವೆಗಳನ್ನು ವಿಸ್ತರಿಸಿದ್ದಕ್ಕಾಗಿ ಅವರು ಸ್ಪೈಸ್ ಜೆಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.