Friday, January 10, 2025
Homeರಾಜ್ಯಸೈಬರ್ ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಸೃಷ್ಟಿ : ಗೃಹಸಚಿವ ಪರಮೇಶ್ವರ್

ಸೈಬರ್ ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಸೃಷ್ಟಿ : ಗೃಹಸಚಿವ ಪರಮೇಶ್ವರ್

Director General of Police post to control cyber crime: Home Minister Parameshwara

ಬೆಂಗಳೂರು,ಜ.8– ಪೊಲೀಸ್ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸಿಕೊಡುವ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ ಮುಂದುವರೆಸುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ಪುಲಿಕೇಶಿನಗರದಲ್ಲಿ ಪೊಲೀಸ್ ವಸತಿಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ರೂಪಿಸಲಾಗಿದ್ದ ಪೊಲೀಸ್ ಗೃಹ 2025ರ ಯೋಜನೆ ಇದೇ ವರ್ಷದ ಫೆಬ್ರವರಿಗೆ ಮುಕ್ತಾಯಗೊಳ್ಳುತ್ತಿದೆ. ಅದನ್ನು ಪೊಲೀಸ್ ಗೃಹ 2030 ಎಂದು ಪರಿಷ್ಕರಣೆ ಮಾಡಿ ಮುಂದುವರೆಸುವ ಅಗತ್ಯವಿದೆ ಎಂದರು.

ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳ ಪೈಕಿ ಶೇ.46ರಷ್ಟು ಸಿಬ್ಬಂದಿಗಳಿಗೆ ಮಾತ್ರ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಮುಂದುವರೆಯಬೇಕು. ಇದಕ್ಕೆ ಅಗತ್ಯವಾದ ಅನುದಾನ ಹಾಗೂ ಇತರ ನೆರವುಗಳನ್ನು ನೀಡಬೇಕು ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಕೇಂದ್ರ ಸರ್ಕಾರಕ್ಕೆ 5 ಸಾವಿರ ಮನೆಗಳ ನಿರ್ಮಾಣಕ್ಕೆ 1600 ಕೋಟಿ ರೂ.ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಯಾವುದೇ ಸ್ಪಂದನೆ ಇಲ್ಲ. ಕೇಂದ್ರವು ಅನುದಾನ ಕೊಟ್ಟರೆ ರಾಜ್ಯದ ಎಲ್ಲಾ ಪೊಲೀಸರಿಗೆ ವಸತಿಗೃಹಗಳನ್ನು ನಿರ್ಮಿಸಿಕೊಡಲು ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿರುವ 1063 ಪೊಲೀಸ್ ಠಾಣೆಗಳ ಪೈಕಿ ಬಹುತೇಕ ಎಲ್ಲದಕ್ಕೂ ಸ್ವಂತ ಕಟ್ಟಡಗಳಿವೆ. 220 ಠಾಣೆಗಳಿಗೆ ಮಾತ್ರ ಸ್ವಂತ ಕಟ್ಟಡ ಇಲ್ಲ. ಅದರಲ್ಲಿ 139 ಹೊಸ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿವೆ, ಬಾಕಿ 100 ಕಟ್ಟಡಗಳಿಗೆ ಹಂತಹಂತವಾಗಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ದೇಶದಲ್ಲೇ ಕರ್ನಾಟಕ ಪೊಲೀಸ್ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳು, ಠಾಣೆಯ ಆಧುನೀಕರಣ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ನಾವು ಮುಂದಿದ್ದೇವೆ. ಅಪರಾಧಗಳ ಪ್ರಮಾಣ ತಗ್ಗಿವೆ ಎಂದರು.

ಹೊಸ ತಲೆಮಾರಿನ ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಕೂಡ ಕಾನೂನನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು.

ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಹೊಸದಾಗಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಯನ್ನು ದೇಶದಲ್ಲಿ ಮೊದಲ ಬಾರಿಗೆ ಸೃಷ್ಟಿಸಲಾಗಿದೆ. ಬ್ಯಾಂಕ್ ವಂಚನೆ ಹಾಗೂ ದತ್ತಾಂಶಗಳ ಕಳವು, ಇತರ ವಿಚಾರಗಳ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ನಮಲ್ಲಿ ಐಟಿ ಕಂಪನಿಗಳು ಹೆಚ್ಚಿದ್ದು, ಅವುಗಳಿಗೆ ಸುರಕ್ಷತಾ ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ. ಹೆಣ್ಣುಮಕ್ಕಳ ಸುರಕ್ಷತೆಗೆ ಒತ್ತು ನೀಡಿದ್ದು, ರಾತ್ರಿಯಿಡೀ ಸ್ವತಂತ್ರವಾಗಿ ಸಂಚರಿಸುವ ವಾತಾವರಣ ನಿರ್ಮಿಸಲಾಗುವುದು ಎಂದರು.

ಕಾನೂನುಪಾಲನೆ ಮಾಡುವವರಿಗೆ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿ ಕಾಣಲಿದೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಶಾಸಕರಾದ ಶ್ರೀನಿವಾಸ್, ರಿಜ್ವಾನ್ ಅರ್ಷದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ಮೋಹನ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬೆಂಗಳೂರಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ರಾಮಚಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News