Thursday, December 19, 2024
Homeರಾಜ್ಯಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಕುರಿತು ಚರ್ಚೆ

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಕುರಿತು ಚರ್ಚೆ

Discussion on construction of MLAs' house in Belgaum

ಬೆಂಗಳೂರು,ಡಿ.8- ಬೆಳಗಾವಿಯಲ್ಲಿ ಶಾಶ್ವತವಾದ ಶಾಸಕರ ಭವನ ನಿರ್ಮಾಣಕ್ಕೆ ಪರಿಶಿಲನೆ ನಡೆಯುತ್ತಿದ್ದು, ನಾನಾ ಆಯಾಮಗಳಿಂದ ಚರ್ಚೆಗಳಾಗುತ್ತಿವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಾದರಿಯಲ್ಲೇ ಹಿಮಾಚಲ ಪ್ರದೇಶ ಹಾಗೂ ನಾಗ್ಪುರದಲ್ಲೂ 2 ವಿಧಾನಸೌಧಗಳಿವೆ.

ಅಲ್ಲಿಯೂ ಕಾಲಕಾಲಕ್ಕೆ ಅಧಿವೇಶನಗಳು ನಡೆಯುತ್ತಿವೆ. ಬೆಳಗಾವಿಯ ಸುವರ್ಣಸೌಧ ಎಲ್ಲಾ ಕಡೆಗಿಂತಲೂ ಹೆಚ್ಚು ಸಕ್ರಿಯವಾಗಿದ್ದು, ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಶಾಶ್ವತವಾದ ಶಾಸಕರ ಭವನ ನಿರ್ಮಿಸಲು ಚರ್ಚೆ ನಡೆಸಲಾಗಿದೆ.

ನಮಲ್ಲಿರುವ ಜಾಗದಲ್ಲಿ ನಾವೇ ಕಟ್ಟಡ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಯಿಂದ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಮಾದರಿಯಲ್ಲೇ ನಿರ್ಮಾಣ ಮಾಡುವುದು, ಅಧಿವೇಶನ ಸಮಯದಲ್ಲಿ ಶಾಸಕರಿಗಾಗಿ ಮೀಸಲಿಡುವ ವಿಚಾರವಿದೆ. ಉಳಿದಂತೆ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡುವುದು ಅಥವಾ ಸರ್ಕಾರದಿಂದ ಕಟ್ಟಡ ನಿರ್ಮಿಸಿ ಆದಾಯ ಹಂಚಿಕೆ ಮಾದರಿಯಲ್ಲಿ ಖಾಸಗಿಯವರ ನಿರ್ವಹಣೆಗೆ ನೀಡುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

9 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತದೆ. ಅಂದು 10.30 ಕ್ಕೆ ಅನುಭವ ಮಂಟಪದ ಭಾವಚಿತ್ರ ಅನಾವರಣಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದ ಸಚಿವರು ಹಾಗೂ ಎಲ್ಲಾ ಪಕ್ಷದ ಸದನದ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅದರ ನಂತರ ಸಂತಾಪ ಸೂಚನೆ ಹಾಗೂ ಕಾರ್ಯಕಲಾಪಗಳು ಮುಂದುವರೆಯಲಿವೆ. ಮಧ್ಯಾಹ್ನ 1 ಗಂಟೆಗೆ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆ ನಡೆಯಲಿದ್ದು, ಸದನದ ಪ್ರತ್ಯಯಗಳ ಬಗ್ಗೆ ಚರ್ಚೆ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯ ಕುರಿತು ಸಮಾಲೋಚನೆ ನಡೆಸಲಾಗುವುದು. ಸುವರ್ಣಸೌಧ ರಾಜ್ಯದ ಅಸಿತೆಯಾಗಿದ್ದು, ಇಲ್ಲಿ ಕರ್ನಾಟಕದ ಒಟ್ಟಾರೆ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿವೆ.

ಕರ್ನಾಟಕ ವಿಶ್ವವಿದ್ಯಾಲಯ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಕಾರ್ಮಿಕ, ಪಂಚಾಯತ್ರಾಜ್, ಪ್ರವಾಸೋದ್ಯಮ ಸೇರಿದಂತೆ ಐದು ವಿಧೇಯಕಗಳು ಮಂಡನೆಯಾಗಲಿವೆ.
ದರ್ಶನ್ ಪುಟ್ಟಣ್ಣಯ್ಯ ಮಂಡಿಸಿರುವ ಹಮಾಮಾನ ಬದಲಾವಣೆ, ಎಂ.ವೈ.ಪಾಟೀಲ್ ಮಂಡಿಸಿರುವ ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಎಚ್.ಕೆ.ಸುರೇಶ್ ಮಂಡಿಸಿರುವ ಬೇಲೂರು-ಹಳೇಬೀಡು ವಿಶ್ವಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರ, ಖಾಸಗಿ ವಿಧೇಯಕಗಳು ಸ್ವೀಕಾರವಾಗಿವೆ ಎಂದರು.

ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲೇ ಬೆಳಗಾವಿ ಸುವರ್ಣಸೌಧದ ಸಭಾಧ್ಯಕ್ಷರ ಆಸನವನ್ನು ರೋಸ್ವುಡ್ನಲ್ಲಿ ಪುನರ್ ರಚಿಸಲಾಗಿದೆ. ಅಧಿವೇಶನದಲ್ಲಿ ಸುವ್ಯವಸ್ಥೆಗಳಿಗಾಗಿ ಜಿಲ್ಲಾಡಳಿತ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದು, 6 ಸಾವಿರ ಪೊಲೀಸರು ಸೇರಿದಂತೆ ಒಟ್ಟು 8 ಸಾವಿರ ಸಿಬ್ಬಂದಿಯನ್ನು ಅಧಿವೇಶನಕ್ಕಾಗಿ ನಿಯೋಜಿಸಲಾಗಿದೆ.

ಸಾರಿಗೆ, ವಸತಿ, ಊಟೋಪಚಾರ, ತಾಂತ್ರಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು 10 ಸಮಿತಿಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ. ಹೆದ್ದಾರಿ ಸಮೀಪದ ಮುಂಬಾಗಿಲಿನಿಂದ ಸುವರ್ಣಸೌಧದವರೆಗೆ ಸಂಚಾರಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಹಾತಗಾಂಧೀಜಿಯವರು ಬೆಳಗಾವಿ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಭಾಗವಹಿಸಿ 100 ವರ್ಷಗಳಾದ ಹಿನ್ನೆಲೆಯಲ್ಲಿ 100 ಭಾವಚಿತ್ರಗಳ ಪ್ರದರ್ಶನವನ್ನು ಸುವರ್ಣಸೌಧದ ಎಲ್ಲಾ ಪಿಲ್ಲರ್ಗಳಿಗೂ ಅಳವಡಿಸಲಾಗಿದೆ.

ಅಧಿವೇಶನದಲ್ಲಿ ಹೆಚ್ಚಿನ ಶಾಸಕರು ಭಾಗವಹಿಸಬೇಕು. ಕೃತಕ ಬುದ್ಧಿಮತ್ತೆ ಆಧರಿತ ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದಾಗಿ ಶಾಸಕರ ಹಾಜರಾತಿ ಸ್ಪಷ್ಟವಾಗಿ ಲಭ್ಯವಾಗುತ್ತದೆ.
ಶಾಸಕರು ಸದನಕ್ಕೆ ಗೈರು ಹಾಜರಾಗುವುದನ್ನು ಜನ ಗಮನಿಸುತ್ತಾರೆ. ಹಾಗಾಗಿ ಎಲ್ಲರೂ ಭಾಗವಹಿಸಿ, ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

RELATED ARTICLES

Latest News