Sunday, September 8, 2024
Homeರಾಜ್ಯಮುಡಾ ಅಕ್ರಮ ಚರ್ಚೆಗೆ ಅವಕಾಶ ನೀಡುವ ರೂಲಿಂಗ್ ಮರು ಪರಿಶೀಲನೆ ಮತ್ತೆ ತಿರಸ್ಕಾರ

ಮುಡಾ ಅಕ್ರಮ ಚರ್ಚೆಗೆ ಅವಕಾಶ ನೀಡುವ ರೂಲಿಂಗ್ ಮರು ಪರಿಶೀಲನೆ ಮತ್ತೆ ತಿರಸ್ಕಾರ

ಬೆಂಗಳೂರು,ಜು.25- ಮುಡಾ ಅಕ್ರಮ ನಿವೇಶನ ಹಂಚಿಕೆ ಕುರಿತಂತೆ ಸದನದಲ್ಲಿ ಅವಕಾಶ ನೀಡುವ ರೂಲಿಂಗ್ ಮರುಪರಿಶೀಲನೆ ಮಾಡಬೇಕೆಂಬ ಪ್ರತಿಪಕ್ಷಗಳ ಸದಸ್ಯರ ಕೋರಿಕೆಯನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತೆ ತಿರಸ್ಕರಿಸಿದ್ದಾರೆ.

ಬುಧವಾರವಷ್ಟೇ ಪ್ರತಿಪಕ್ಷಗಳ ಸದಸ್ಯರು ಮುಡಾ ಪ್ರಕರಣ ಕುರಿತು ಮಂಡಿಸಿದ್ದ ನಿಲುವಳಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಈ ವೇಳೆ ಪ್ರತಿಪಕ್ಷದ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಾವು ನೀಡಿರುವ ರೂಲಿಂಗ್ನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡರು.

ಗದ್ದಲದ ನಡುವೆಯೇ ತಮ್ಮ ತೀರ್ಮಾನವನ್ನು ಪ್ರಕಟಿಸಿದ ಹೊರಟ್ಟಿಯವರು ನಿಲುವಳಿ ಸೂಚನೆ ಪ್ರಸ್ತಾವನೆಗೆ ಚರ್ಚೆ ಮಾಡಲು ವಿಷಯವು ತುಂಬ ಸಾರ್ವಜನಿಕವಾಗಿ ಮಹತ್ವದ್ದಾಗಿರಬೇಕು. ಅಲ್ಲದೆ ಘಟನೆಯು ಇತ್ತೀಚೆಗೆ ನಡೆದಿರಬೇಕು. ಪ್ರತಿಪಕ್ಷಗಳ ಸದಸ್ಯರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ನಿಲುವಳಿ ಸೂಚನೆ ಮಾಡಿದ್ದರು. ನಾನು ನಿಯಮ 59ರಡಿ ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಅದೇ ರೀತಿ ಮುಡಾ ಪ್ರಕರಣದ ಬಗ್ಗೆಯೂ ಚರ್ಚೆಗೆ ಕೇಳಿದ್ದೀರಿ. ಈಗಾಗಲೇ ನಾನು ರೂಲಿಂಗ್ ನೀಡಿ ತಿರಸ್ಕರಿಸಿದ್ದೆನು.

ಇದನ್ನು ಮರುಪರಿಶೀಲನೆ ಮಾಡಬೇಕೆಂದು ಪ್ರತಿಪಕ್ಷದ ಸದಸ್ಯರು ಮನವಿ ಮಾಡಿದ್ದರು. ನಾನು ಹಿಂದಿನ ನಡವಳಿಕೆಯನ್ನು ಅಧ್ಯಯನ ನಡೆಸಿ ಒಂದು ಬಾರಿ ರೂಲಿಂಗ್ ನೀಡಿದ ಮೇಲೆ ಚರ್ಚೆಗೆ ಅವಕಾಶವಿಲ್ಲ. ಹೀಗಾಗಿ ನಿಮ್ಮ ಮನವಿಯನ್ನು ತಿರಸ್ಕರಿಸುತ್ತೇನೆ ಎಂದು ಪ್ರಕಟಿಸಿದರು. ಇದರಿಂದ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಗದ್ದಲ, ಕೋಲಾಹಲ ಉಂಟಾಯಿತು.

RELATED ARTICLES

Latest News