Friday, November 22, 2024
Homeರಾಜಕೀಯ | Politicsಆರ್‌.ಅಶೋಕ್‌ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ, ಪ್ರತಿಪಕ್ಷದ ನಾಯಕನಾಗಿ ಬೇರೊಬ್ಬರ ಆಯ್ಕೆಗೆ ಚರ್ಚೆ

ಆರ್‌.ಅಶೋಕ್‌ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ, ಪ್ರತಿಪಕ್ಷದ ನಾಯಕನಾಗಿ ಬೇರೊಬ್ಬರ ಆಯ್ಕೆಗೆ ಚರ್ಚೆ

ಬೆಂಗಳೂರು,ಜೂ.28- ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಾರ್ಯವೈಖರಿಯ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು, ಹುದ್ದೆಯಿಂದ ತೆರವುಗೊಳಿಸಿ ಬೇರೊಬ್ಬರನ್ನು ನೇಮಕ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ವಿಫಲರಾಗಿರುವ ಅಶೋಕ್‌ ಬದಲಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ಛಾಟಿ ಬೀಸುವ ಯುವ ನಾಯಕನನ್ನು ನೇಮಿಸುವ ಬಗ್ಗೆ ಚಿಂತನೆ ನಡೆದಿದೆ.

ಅಶೋಕ್‌ ಅವರ ಸ್ಥಾನಕ್ಕೆ ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಜುಲೈನಲ್ಲಿ ಅಧಿವೇಶನ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಅಷ್ಟರಲ್ಲಿ ವಿಜಯೇಂದ್ರ ಹೆಸರನ್ನು ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಅಶೋಕ್‌ ಸರ್ಕಾರದ ವೈಫಲ್ಯಗಳನ್ನು ಸದನದ ಒಳಗೆ ಮತ್ತು ಹೊರಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬಂದಿದೆ.

ಹೀಗಾಗಿ ಮುಂದಿನ ಮಳೆಗಾಲದ ಅಧಿವೇಶನದ ಒಳಗೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಅಶೋಕ್‌ ಬದಲಿಗೆ ಹಿಂದುಳಿದ ವರ್ಗಗಳ ನಾಯಕ ಆರ್‌ಎಸ್‌‍ಎಸ್‌‍ ಹಿನ್ನಲೆಯ ಸುನೀಲ್‌ಕುಮಾರ್‌ ನೇಮಕವಾಗಬಹುದೆಂಬ ಗುಸುಗುಸು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ.

ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಅನೇಕರು ಸರ್ಕಾರವನ್ನು ಸದನದಲ್ಲಿ ದಾಖಲೆಗಳನ್ನಿಟ್ಟು ಮುಜುಗರಕ್ಕೆ ಸಿಲುಕಿಸುತ್ತಿದ್ದರು. ಆದರೆ ಅಶೋಕ್‌ ಇದುವರೆಗೂ ಇಂತಹ ಒಂದೇ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎಂಬ ಅಸಮಾಧಾನ ಶಾಸಕರಲ್ಲಿ ಮಡುಗಟ್ಟಿದೆ.

ಕಾನೂನು ಸುವ್ಯವಸ್ಥೆ , ರಾಜ್ಯದಲ್ಲಿ ನಡೆದ ಸರಣಿ ಕೊಲೆಗಳು, ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಕೇಳಿಬಂದ ಹಗರಣ, ಸರ್ಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಸಮರ್ಥವಾಗಿ ಮಾತನಾಡುವಲ್ಲಿ ಅಶೋಕ್‌ ವಿಫಲರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಬಹುತೇಕ ಶಾಸಕರು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳಿಗೆ ಎದುರೇಟು ನೀಡುವ ನಾಯಕನೊಬ್ಬನನ್ನು ಛಾಯಾ ಮುಖ್ಯಮಂತ್ರಿ ಎಂದೇ ಕರೆಯಲ್ಪಡುವ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೂರಿಸಬೇಕೆಂಬ ಒಕ್ಕೊರಲಿನ ಆಗ್ರಹ ಮಾಡುತ್ತಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಕೆಲವು ಹಗರಣಗಳ ಬಗ್ಗೆ ಅಂದು ಸಿದ್ದರಾಮಯ್ಯನವರು ಗಂಟೆಗಟ್ಟಲೇ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ಸಾಕಷ್ಟು ಬಾರಿ ಮುಜುಗರಕ್ಕೂ ಸಿಲುಕಿಸಿದ ನಿದರ್ಶನಗಳೂ ಇವೆ. ಆದರೆ ಅಶೋಕ್‌ ಅವರು ಈವರೆಗೂ ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಒಂದೇ ಒಂದು ಪ್ರಸಂಗವೂ ಜರುಗಿಲ್ಲ. ಬದಲಿಗೆ ಕೆಲವು ಸಂದರ್ಭಗಳಲ್ಲಿ ಅವರೇ ಮುಜುಗರಕ್ಕೀಡಾದ ಪ್ರಸಂಗವೂ ಜರುಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಕುತ್ತು ಎಂಬ ಮಾತು ಜಗನ್ನಾಥ ಭವನದಿಂದಲೇ ರಿಂಗಣಿಸುತ್ತಿದೆ.

ಶೀಘ್ರದಲ್ಲೇ ಆಯ್ಕೆ:
ಇನ್ನು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾಗಿರುವುದರಿಂದ, ಪ್ರತಿಪಕ್ಷ ಬಿಜೆಪಿಯು ಪರಿಷತ್ತಿನಲ್ಲಿ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲು ಮುಂದಾಗಿದೆ.ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮತ್ತೊಬ್ಬ ಎಂಎಲ್‌ಸಿ ಎನ್‌.ರವಿಕುಮಾರ್‌ ಅವರ ಹೆಸರು ಕೂಡ ಕೇಳಿಬರುತ್ತಿದೆ.

ವಿರೋಧ ಪಕ್ಷದ ನಾಯಕರಾಗಿದ್ದ ಪೂಜಾರಿ ಅವರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅದರಂತೆ ಅವರು ಪರಿಷತ್ತಿಗೆ ರಾಜೀನಾಮೆ ನೀಡಿದರು. ಆಡಳಿತಾರೂಢ ಕಾಂಗ್ರೆಸ್‌‍ನ್ನು ಸಮರ್ಥವಾಗಿ ಎದುರಿಸಬಲ್ಲ ಮೇಲನೆಗೆ ಬಿಜೆಪಿ ಈಗ ಪ್ರಬಲ ವಿರೋಧ ಪಕ್ಷದ ನಾಯಕನನ್ನು ಹುಡುಕುತ್ತಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಒಕ್ಕಲಿಗರಾಗಿದ್ದಾರೆ, ಸಿ.ಟಿ.ರವಿ ಕೂಡ ಒಕ್ಕಲಿಗರಾಗಿರುವುದರಿಂದ ಪರಿಷತ್‌ ಪ್ರತಿಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಒಬಿಸಿ ಸಮುದಾಯಕ್ಕೆ ಸೇರಿದ ರವಿಕುಮಾರ್‌ ಅವರು ಜನಪ್ರಿಯ ಮುಖಂಡರಾಗಿದ್ದಾರೆ, ಇದರೊಂದಿಗೆ ಸದನದಲ್ಲಿ ಒಕ್ಕಲಿಗ ಮತ್ತು ಒಬಿಸಿ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡಿರುವುದಾಗಿ ಪಕ್ಷ ಹೇಳಿಕೊಳ್ಳಬಹುದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲಿಂಗಾಯತ. ಅಲ್ಲದೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ್‌ ಕೂಡ ಲಿಂಗಾಯತರಾಗಿದ್ದಾರೆ.

ರವಿಕುಮಾರ್‌ ಅವರನ್ನು ಪರಿಷತ್‌ ಪ್ರತಿಪಕ್ಷ ನಾಯಕನಾಗಿ ನೇಮಕ ಮಾಡಲು ಹಲವು ನಾಯಕರು ಮತ್ತು ಎಂಎಲ್‌ಸಿಗಳು ಉತ್ಸುಕರಾಗಿದ್ದಾರೆ. ಪಕ್ಷದ ನೆಲೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಶ್ರಮಿಸಿದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಪಕ್ಷದ ಹೈಕಮಾಂಡ್‌ ಉತ್ಸುಕವಾಗಿದೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟದಲ್ಲಿ ಸದನದಲ್ಲಿ ಕಾಂಗ್ರೆಸ್‌‍ಗಿಂತ ಹೆಚ್ಚಿನ ಶಾಸಕರಿದ್ದಾರೆ. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರವಿದ್ದು, ಹೀಗಾಗಿ ಪ್ರಬಲ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಬಿಜೆಪಿ ಮೇಲೆ ಒತ್ತಡವಿದೆ. ಈ ಹಿಂದೆ ಸಚಿವರಾಗಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಸಿ.ಟಿ.ರವಿ ಪಕ್ಷಕ್ಕೆ ಮತ್ತೊಂದು ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ ನಾಯಕರಾಗಿರುವ ಸಿ,ಟಿ ರವಿ ಅವರು ಕೂಡ ಒಂದು ವಿಭಾಗದ ಬೆಂಬಲ ಪಡೆದಿದ್ದಾರೆ. ಮತ್ತೊಬ್ಬ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಕೂಡ ರೇಸ್‌‍ನಲ್ಲಿದ್ದಾರೆ. ದೆಹಲಿಯಲ್ಲಿರುವ ವಿಜಯೇಂದ್ರ ಅವರು ಹಿರಿಯ ನಾಯಕರ ಜೊತೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News