ಬೆಳಗಾವಿ,ಡಿ.11- ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ಕರೆದಿದ್ದ ಪ್ರಮುಖರ ಸಭೆಯಲ್ಲಿ ಮತ್ತೆ ಭಿನ್ನಮತ ಸೋಟಗೊಂಡಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಸರ್ಕಾರದ ವೈಫಲ್ಯಗಳ ವಿರುದ್ಧ ಸದನದಲ್ಲಿ ಹೋರಾಟ ನಡೆಸುವ ಕುರಿತಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಸಭೆಗೆ ಶಾಸಕರಾದ ಆರಗಜ್ಞಾನೇಂದ್ರ, ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು. ಆದರೆ ಸಭೆ ನಡೆಯುವ ಕಚೇರಿ ಹತ್ತಿರ ಬಂದಿದ್ದರೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನನ್ನನ್ನು ಸಭೆಗೆ ಕರೆದಿಲ್ಲ. ನಾನೇಕೆ ಹೋಗಲಿ ಎಂದು ಹೊರಗೆ ಕುತಿದ್ದರು.
ಪ್ರತಿಪಕ್ಷದ ನಾಯಕ ಅಶೋಕ್ ಅವರ ಕೊಠಡಿಯಲ್ಲಿ ಸಭೆ ನಡೆಯುತ್ತಿದ್ದಾಗ ಕೊಠಡಿ ಮುಂಭಾಗದ ಮೊಗಸಾಲೆಯಲ್ಲಿ ಸ್ವಲ್ಪ ಹೊತ್ತು ವಿಶ್ವನಾಥ್ ಕುಳಿತು, ತಮಗೂ ಸಭೆಗೂ ಸಂಬಂಧವೇ ಇಲ್ಲ ಎಂಬಂತಿದ್ದರು.ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ವಿಶ್ವನಾಥ್ ಅವರನ್ನು ಕರೆತರುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ನಂತರ ಅವರು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.
ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆ ಏರಿಕೆ
ಬಳಿಕ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆ ಮುಗಿದ ಮೇಲೆ ಕಚೇರಿಗೆ ಆಗಮಿಸಿದರು. ಯಾವುದೇ ಬಿಜೆಪಿ ಶಾಸಕರ ಜೊತೆ ಮಾತನಾಡದೆ ನೇರವಾಗಿ ಸಭೆಗೆ ತೆರಳಿದರು. ಕಳೆದ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಹಲ್ಲೆ ಪ್ರಕರಣದಲ್ಲಿ ಸದನದಲ್ಲೇ ಹೋರಾಟ ನಡೆಸಬೇಕೆ? ಇಲ್ಲವೇ ಸಭಾತ್ಯಾಗ ಮಾಡಬೇಕೆ ಎಂಬುದರ ಕುರಿತು ವಿಪಕ್ಷದಲ್ಲೇ ಗೊಂದಲ ಉಂಟಾಗಿತ್ತು. ಧರಣಿ, ಸಭಾತ್ಯಾಗ ನಡೆಸುವ ವಿಚಾರದಲ್ಲಿ ಜಟಾಪಟಿ ನಡೆದಿತ್ತು. ಎಸ್.ಆರ್.ವಿಶ್ವನಾಥ್ ಹಾಗೂ ಆರ್.ಅಶೋಕ್ ನಡುವೆ ಏರು ಧ್ವನಿಯಲ್ಲಿ ವಾಗ್ವಾದ ನಡೆದಿತ್ತು.