ಬೆಂಗಳೂರು,ಸೆ.6- ಕಾಂಗ್ರೆಸ್ ನಾಯಕರಿಗೆ ವಿದ್ಯುನಾನ ಮತಯಂತ್ರ (ಇವಿಎಂ)ದ ಬಗ್ಗೆ ನಂಬಿಕೆ ಇಲ್ಲದಿದ್ದರೆ ತತ್‌ಕ್ಷಣವೇ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯಲಿ ಎಂದು ಬಿಜೆಪಿ ಬಹಿರಂಗ ಸವಾಲು ಹಾಕಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಇವಿಎಂ ತುಂಬಾ ಚೆನ್ನಾಗಿ ಕೆಲಸ ಮಾಡಿತ್ತು. ಈಗ ಸೋಲುವ ಭೀತಿ ಎದುರಾದಾಗ ಇದೇ ಇವಿಎಂಗಳ ಮೇಲೆ ದೋಷಾರೋಪ ಮಾಡುತ್ತಿದ್ದೀರಿ. ಇದರ ಬದಲು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದರು.
ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ
ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರ(ಬ್ಯಾಲೆಟ್ ಪೇಪರ್) ಬಳಸಲು ರಾಜ್ಯ ಚುನಾವಣಾ ಆಯೋಗಕ್ಕೆ ತಿದ್ದುಪಡಿ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಬಸವರಾಜ ಬೊಮಾಯಿ ಮಾತನಾಡಿ, ಬ್ಯಾಲೆಟ್ ಪೇಪರ್‌ಗಳಲ್ಲಿ ಅಕ್ರಮ, ಗೊಂದಲ ಗೊಂದಲವಾಗುತ್ತಿತ್ತು. ಇದನ್ನು ತಪ್ಪಿಸಲು ಇವಿಎಂಗಳು ಬಂದವು. 2004, 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಗೆ ಇವಿಎಂ ಬಗ್ಗೆ ತಕರಾರು ಇರಲಿಲ್ಲ. ಸಿದ್ದರಾಮಯ್ಯ ಗೆದ್ದಿದ್ದೇ ಇದೇ ಇವಿಎಂನಿಂದ. ಇವರು ಗೆಲ್ಲಲು ಇವಿಎಂ ಬೇಕಾಗಿತ್ತು. ಈಗ ಬೆಂಗಳೂರಿನವರಿಗೆ 25 ವರ್ಷ ಹಿಂದೆ ಹೋಗಿ ಮತಪತ್ರದಲ್ಲಿ ಮತದಾನ ಮಾಡಿ ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಳ್ಳಿಯವರೇ ಇವಿಎಂಗಳನ್ನು ಅಚ್ಚುಕಟ್ಟಾಗಿ ಬಳಸುವುದನ್ನು ಕಲಿತಿದ್ದಾರೆ. ಇವಿಎಂಗಳಲ್ಲಿ ಗೊಂದಲ, ದೋಷ ಇದ್ದರೆ ಬಂದು ತೋರಿಸಿ, ದಾಖಲೆ ಕೊಡಿ ಎಂದರೂ ಯಾರೂ ಮುಂದೆ ಬರಲಿಲ್ಲ. ಈಗ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್‌ಗಳನ್ನು ಅನುಭವದ ಮೇಲೆ ತರುತ್ತಿದ್ದಾರೆಂದ ಸಿಎಂ ಹೇಳಿದ್ದಾರೆ. ಯಾವ ಅನುಭವ ಇದೆ ಇವರಿಗೆ? ನಿಮಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ದರೆ ರಾಜೀನಾಮೆ ಕೊಡಿ. ರಾಜೀನಾಮೆ ಕೊಟ್ಟು ಇವಿಎಂ ಸರಿಯಿಲ್ಲ ಎಂದು ಹೇಳಿ ಎಂದು ಸವಾಲು ಹಾಕಿದರು.
ಸರ್ಕಾರದ ಒಳಮೀಸಲಾತಿ ಹಂಚಿಕೆ ಸರಿಯಿಲ್ಲ. ಸರ್ಕಾರ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ. ಅನ್ಯಾಯಕ್ಕೊಳಗಾದ ಸಮುದಾಯಗಳ ಜತೆ ಬಿಜೆಪಿ ಇದೆ. ಮೊದಲು ಸರ್ಕಾರ ಗೊಂದಲ ಸರಿಪಡಿಸಿಕೊಳ್ಳಲು ಅವಕಾಶ ಕೊಡುತ್ತೇವೆ. ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಳ್ಳದಿದ್ದರೆ ನಾವು ಮುಂದೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಮತಪತ್ರ ಇದ್ದಾಗ ಆಗಿರುವ ಅಕ್ರಮಗಳು ಬೇಕಾದಷ್ಟು ಇವೆ. ಮತಪತ್ರಗಳ ಬಗ್ಗೆ ಉತ್ಸಾಹದಿಂದ ಮಾತನಾಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಅಕ್ರಮಗಳ ಬಗ್ಗೆ ಹಿಂತಿರುಗಿ ನೋಡಬೇಕು ಎಂದು ಬೊಮಾಯಿ ಹೇಳಿದರು.
ಪ್ರಧಾನಿ ನರೇಂದ್ರಮೋದಿಯವರು ಸಾಮಾಜಿಕ ನ್ಯಾಯಕ್ಕೆ ಹೆಸರಾದವರು. ಸಿದ್ದರಾಮಯ್ಯ ಥರ ಬೊಗಳೆ ಬಿಟ್ಕೊಂಡು ಓಡಾಡುವುದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ 2024ರ ಡಿಸೆಂಬರ್‌ನಲ್ಲಿ ಒಳಮೀಸಲಾತಿ ಬಗ್ಗೆ ಮಹತ್ವದ ತೀರ್ಪು ಬಂತು. ಅಸಮಾನರನ್ನು ಪ್ರಬಲರ ಜತೆ ಸೇರಿಸಿ ಮೀಸಲಾತಿ ಹಂಚಬಾರದು ಎಂದು ನ್ಯಾಯಾಲಯ ಹೇಳಿತ್ತು. ನಂತರ ಈ ಸರ್ಕಾರ ಮತ್ತೆ ನಾಗಮೋಹನ ದಾಸ್ ನೇತೃತ್ವದ ಆಯೋಗ ರಚಿಸಿದರು.
ನಾಗಮೋಹನದಾಸ್ ಆಯೋಗ ಕೊಟ್ಟಿದ್ದ ಶಿಫಾರಸ್ಸನ್ನು ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದರು. ಹಿಂದೆ ವರದಿ ಕೊಟ್ಟಿದ್ದ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ಕೊಟ್ಟಿದ್ದ ಶಿಫಾರಸುಗಳನ್ನು ಕಾಂಗ್ರೆಸ್ ಗಾಳಿಗೆ ತೂರಿದೆ. ಸುಪ್ರೀಂಕೋರ್ಟ್ ಆದೇಶದ ಪಾಲನೆಯೂ ಮಾಡಲಿಲ್ಲ ಎಂದು ಕಿಡಿಕಾರಿದರು.
ಒಳಮೀಸಲಾತಿ ಬಗ್ಗೆ ನಾಗಮೋಹನ ದಾಸ್ ಶಿಫಾರಸ್ಸು ಇದ್ದಿದ್ದು ಕೈಬಿಟ್ಟು 6+6+5 ಒಳಮೀಸಲಾತಿ ಹಂಚಿದರು. ಈ ಮೂಲಕ ಎಸ್ಸಿ ಸಮುದಾಯಗಳಿಗೆ ಕಾಂಗ್ರೆಸ್ ಸಾಮಾಜಿಕ ಅನ್ಯಾಯ ಮಾಡಿದೆ. ಎಕೆ, ಎಡಿ, ಎಎ ವರ್ಗಗಳಿಗೆ ಸರ್ಕಾರದಿಂದ ವಂಚನೆಯಾಗಿದೆ. ಈ ಶ್ರೇಣಿಯಲ್ಲಿ ತಳಮಟ್ಟದಲ್ಲಿರುವ ಅಲೆಮಾರಿಗಳು, ಈ ಸಮುದಾಯಗಳಿಗೆ ಇವತ್ತು ಯಾವುದೇ ಮೀಸಲಾತಿ ಸಿಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಳಮೀಸಲಾತಿಯಲ್ಲಿ ಈ ಸರ್ಕಾರ ಸಂಪೂರ್ಣ ಗೊಂದಲ ಸೃಷ್ಟಿ ಮಾಡಿದೆ. ಯಾರೇ ಹೋಗಿ ಸರ್ಕಾರದ ಬಳಿ ಹೋಗಿ ಕೇಳಿದ್ರೂ ಕೋರ್ಟ್‌ಗೆ ಹೋಗಿ ಅಂತಿದ್ದಾರೆ. ಕಾಂಗ್ರೆಸ್ ಒಳಮೀಸಲಾತಿ ವಿಚಾರದಲ್ಲಿ ರಾಜಕೀಯ ನಡೆ ಇಟ್ಟಿದೆ. ಒಳಸಮುದಾಯಗಳ ಮಧ್ಯೆ ಜಗಳ ಹಚ್ಚುವ ಅಪಖ್ಯಾತಿ ಸಿದ್ದರಾಮಯ್ಯ ಮೇಲೆ ಬರಲಿದೆ ಎಂದು ಬೊಮಾಯಿ ಆರೋಪಿಸಿದರು.
ತುಳಿತಕ್ಕೆ ಒಳಗಾದ ಎಲ್ಲ ದಲಿತ ಸಮುದಾಯಗಳೂ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರು. ದಲಿತರಿಗೆ ಸ್ವಾತಂತ್ರ್ಯ ಬಂದ ಮೇಲೆ ಎಲ್ಲ ಹಕ್ಕು, ಅನುಕೂಲ ಕೊಡುವುದಾಗಿ ಗಾಂಧಿ-ಅಂಬೇಡ್ಕರ್ ಮಧ್ಯೆ ಪೂನಾ ಪ್ಯಾಕ್ಟ್ ಆಗಿತ್ತು. ಹಾಗಾಗಿ ದಲಿತ ಸಮುದಾಯಗಳೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂಬೇಡ್ಕರ್ ಕಾರಣರಾಗಿದ್ದರು. ದಲಿತ ಸಮಯದಾಯಗಳ ಭಾಗವಹಿಸುವಿಕೆಯಿಂದ ಸ್ವಾತಂತ್ರ್ಯ ಹೋರಾಟ ಪರಿಪೂರ್ಣವಾಯಿತು.
ಆಗ ಕರ್ನಾಟಕದ ಆರು ಸಮಯದಾಯಗಳು ಪರಿಶಿಷ್ಟ ಪಟ್ಟಿಯಲ್ಲಿದ್ದವ.
ಈಗ ಅವು 101 ಜಾತಿಗಳಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ 65 ವರ್ಷಗಳ ಕಾಲ ಆಡಳಿತ ನಡೆಸಿತು. ಎಸ್‌ಸಿ ಪಟ್ಟಿಗೆ ಕಾಂಗ್ರೆಸ್ ಸಮುದಾಯಗಳನ್ನು ಸೇರಿಸುತ್ತಾ ಹೋಯಿತೇ ವಿನಾ ಅದಕ್ಕೆ ತಕ್ಕಂತೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಮೀಸಲಾತಿ ಹೆಚ್ಚಾಗದ ಕಾರಣ ಕಾಲಕಾಲಕ್ಕೆ ದಲಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ ಇದರ ಪರಿಣಾಮ ಮೀಸಲಾತಿಗಾಗಿ ಬೇಡಿಕೆ, ಹೋರಾಟ ತೀವ್ರವಾಗಿ ನಡೆಯುತ್ತಾ ಬಂತು.
ಇದೆಲ್ಲದರ ಹಿನ್ನೆಲೆಯಲ್ಲಿ ಹಲವು ಸಮಿತಿಗಳ ರಚನೆಯಾಯಿತು. ನ್ಯಾ.ನಾಗಮೋಹನ ದಾಸ್ ಸಮಿತಿ ರಚಿಸಲಾಯಿತು, ಯಡಿಯೂರಪ್ಪ ಸಿಎಂ ಆಗಿದ್ದಾಗ ನಾಗಮೋಹನ ದಾಸ್ ಸಮಿತಿ ವರದಿ ಕೊಟ್ಟಿದೆ. ಎಸ್‌ಸಿ ಮೀಸಲಾತಿ 15% ರಿಂದ 17% ಆಯ್ತು, ಎಸ್‌ಟಿ ಮೀಸಲಾತಿ 3% ರಿಂದ 7% ಆಯಿತು. ನಾನು ಸಿಎಂ ಆಗಿದ್ದಾಗ ಪರಿಶಿಷ್ಟರಿಗೆ 17% ಮೀಸಲಾತಿ ಹೆಚ್ಚಿಸಲಾಗಿತ್ತು. ಇದಕ್ಕೆ ಹಲವರ ವಿರೋಧ ಇದ್ದರೂ ಸಮುದಾಯಕ್ಕೆ ಪರವಾಗಿ ನಾವು ತೀರ್ಮಾನ ಮಾಡಿದ್ದೆವು ಎಂದು ಹೇಳಿದರು.