ಬೆಂಗಳೂರು,ಆ.13- ಇನ್ನು ಒಂದೂವರೆ ತಿಂಗಳಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 11 ಬಿ ಖಾತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ 29 ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಇನ್ನು 15 ದಿನಗಳಲ್ಲಿ ನಿಯಮಗಳನ್ನು ರೂಪಿಸಲಾಗುವುದು.
ಸದ್ಯಕ್ಕೆ ನಮೂನೆ 11, ಬಿ ಖಾತೆ ನೀಡುತ್ತಿಲ್ಲ ಎಂದರು.
ಕಳೆದ ಎರಡು ವರ್ಷದಲ್ಲಿ 1237 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದು ದೇಶದಲ್ಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಗ್ರಹಿಸಿದ ಅತಿಹೆಚ್ಚು ತೆರಿಗೆಯಾಗಿದೆ. ಈ ತೆರಿಗೆ ಹಣವನ್ನು ಪಂಚಾಯ್ತಿಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು. ಇ-ಸ್ವತ್ತು ಸಮಸ್ಯೆಗಳ ಸುಧಾರಣೆಗೆ ಸಮಿತಿ ರಚಿಸಲಾಗಿದೆ. ಅಲ್ಲದೆ ದಿಶಾಂಕ ಆ್ಯಪ್ ಲೋಪದೋಷಗಳನ್ನು ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈಕ್ರೋಗ್ರಿಡ್
ರಾಜ್ಯದ ಎಲ್ಲಾ ಪಂಚಾಯ್ತಿಗಳಲ್ಲೂ ಮೈಕ್ರೋಗ್ರಿಡ್ ಪರಿಕಲ್ಪನೆ ಜಾರಿಗೆ ತಂದು ವಿದ್ಯುತ್ ಖರೀದಿಸಲಾಗುವುದು. ಈ ಮೈಕ್ರೋಗ್ರಿಡ್ ವಿನೂತನ ಯೋಜನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆಂಡರ್ ಕರೆಯಲಾಗಿದೆ. ಈ ಯೋಜನೆಯಡಿ ಬೀದಿದೀಪ, ಪಂಚಾಯ್ತಿ ಕಚೇರಿಗಳಿಗೆ ವಿದ್ಯುತ್ ಬಳಕೆ ಮಾಡಿ ಉಳಿದ ವಿದ್ಯುತ್‌ನ್ನು ಗ್ರಿಡ್‌ಗೆ ಒಪ್ಪಿಸಲಾಗುವುದು ಎಂದರು.
ಬಿಜೆಪಿ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರಮಬದ್ಧ ಆಸ್ತಿಗಳಿಗೆ ನಿಗದಿತ ನಮೂನೆ 9 ಹಾಗೂ 11ಎಗಳನ್ನು ನೀಡಲಾಗುತ್ತಿದ್ದು, ಕ್ರಮಬದ್ಧವಲ್ಲದ ಆಸ್ತಿಗಳಿಗೆ ನಮೂನೆ 11ಬಿ ಅನ್ನು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯ ಡಿಜಿಟಲ್ ಸಹಿ ಮೂಲಕ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕರ ವಿವೇಚನೆಗೆ
ನಿಯಮಾವಳಿಗಳನ್ನು ಸರಳೀಕರಣ ಮಾಡಿ ಗ್ರಾಮೀಣ ರಸ್ತೆ ದುರಸ್ತಿ ಅಭಿವೃದ್ದಿಗೆ ಅನುದಾನ ನೀಡಲಾಗುವುದು. 15ರಿಂದ 18 ಕಿ.ಮೀ ರಸ್ತೆಯನ್ನು ಶಾಸಕರ ವಿವೇಚನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಶಾಲೆಗೆ ಹೋಗಲು ದಾರಿ ಇಲ್ಲದಿದ್ದರೆ ದಾರಿ ವ್ಯವಸ್ಥೆ ಮಾಡಿಕೊಡಲಾಗುವುದು. ನಮ ಹೊಲ-ನಮ ರಸ್ತೆ ಆರೇಳು ವರ್ಷಗಳಿಂದ ಸ್ಥಗಿತವಾಗಿದೆ. ಮುಖ್ಯಮಂತ್ರಿಗಳು ಅನುದಾನ ಒದಗಿಸುವ ಭರವಸೆ ನೀಡಿದ್ದು, ಸದ್ಯದಲ್ಲೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಡಿ ರಾಜ್ಯಾದ್ಯಂತ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಭಾರೀ ಮಳೆ ಪ್ರವಾಹದಿಂದ 518.10 ಕಿ.ಮೀ ರಸ್ತೆ ಹಾಳಾಗಿದೆ. ಈ ರಸ್ತೆಗಳ ದುರಸ್ತಿಗೆ 518.10 ಲಕ್ಷ ರೂ. ಹಾಗೂ 12 ಸೇತುವೆಗಳ ದುರಸ್ತಿಗೆ 17 ಲಕ್ಷ ರೂ. ಅನುದಾನ ಬೇಕಾಗಿದೆ. ಟಾಸ್ಕ್‌ಪೋರ್ಸ್ ಅನುಮೋದನೆ ಇಲ್ಲದೆ ಬೋರ್‌ವೆಲ್‌ಗಳನ್ನು ಮೂರ್ನಾಲ್ಕು ಜಿಲ್ಲೆಗಳಲ್ಲಿ ಕೊರೆದಿದ್ದು, ಮುಖ್ಯಮಂತ್ರಿ ಅನುಮತಿ ಕೊಟ್ಟರೆ ಅವುಗಳ ಹಣ ಪಾವತಿಗೆ ಕ್ರಮ ವಹಿಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಜಗದೀಶ್ ಶಿವಯ್ಯ ಗುಡಗುಂಟಿ ಅವರು, ನಮ ಕ್ಷೇತ್ರದಲ್ಲಿ ರಸ್ತೆ ಹಾಳಾಗಿದ್ದು, ವಾಹನಗಳು ಓಡಾಡದಂತಾಗಿದೆ. ಗರ್ಭಿಣಿಯರನ್ನು ಹೆರಿಗೆಗಾಗಿ ಜೋಳಿಗೆಯಲ್ಲಿ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಜನರು ಶಾಪ ಹಾಕುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಕೊಂಡೊಯ್ಯಲು ಸೂಕ್ತ ರಸ್ತೆ ಇಲ್ಲ. 10 ಕೋಟಿ ರೂ. ಅನುದಾನ ನೀಡಬೇಕೆಂದು ಒತ್ತಾಯಿಸಿದರು.