Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಹಾಸನಾಂಬ ದರ್ಶನ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ಹಾಸನಾಂಬ ದರ್ಶನ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ಹಾಸನ ಜು.17- ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ಅ.24 ಕ್ಕೆ ತೆರೆದು ನ.3 ರಂದು ಬಾಗಿಲು ಮುಚ್ಚಲಾಗುವುದು. ಜಾತ್ರಾ ಮಹೋತ್ಸವವು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ 9 ದಿನಗಳು ಮಾತ್ರ ದೊರಕುತ್ತದೆ. ಭಕ್ತಾಧಿಗಳಿಗೆ ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸುವ ನಿಟ್ಡಿನಲ್ಲಿ ಸುಸ್ಸಜ್ಜಿತವಾದ ಸಿದ್ದತೆ ಮಾಡಿಕೊಳ್ಳುವುದರ ಜೊತೆಗೆ ಕಳೆದ ಬಾರಿ ಕಂಡು ಬಂದಿರುವ ಸಣ್ಣಪುಟ್ಟ ಲೋಪದೋಷಗಳನ್ನು ಗಮನಿಸಿ ಸರಿಪಡಿಸಲು ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

ಕುಡಿಯುವ ನೀರು, ವಿದ್ಯುತ್‌ ದೀಪಾಲಂಕಾರ, ಹೂವಿನ ಅಲಂಕಾರ, ಲಡ್ಡು ಪ್ರಸಾದ, ದೊನ್ನೆ ಪ್ರಸಾದ ಮತ್ತಿತರೆ ಅಗತ್ಯವಿರುವ ಎಲ್ಲಾ ಸಿದ್ದತೆಗಾಗಿ ಒಂದು ವಾರದೊಳಗೆ ಟೆಂಡರ್‌ ಕರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಾತ್ರಾ ಸಂದರ್ಭದಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಹೆಚ್ಚು ಜನಸಂದಣಿ ಇರುವ ಕಾರಣ ಶೌಚಾಲಯ ನಿರ್ವಹಣೆ ಬಹಳ ಅಚ್ಚುಕಟ್ಟಾಗಿ ಆಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಯಾವುದೇ ಅವಘಡಗಳಿಗೆ ಆಸ್ಪದವಿಲ್ಲದಂತೆ ದೇವಸ್ಥಾನದ ಸುತ್ತ ಇರುವ ವಿದ್ಯುತ್‌ ಲೈನ್‌ ಅನ್ನು ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಸಲು ಚೆಸ್ಕಾಂ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಜಾತ್ರಾ ಸಂದರ್ಭದಲ್ಲಿ ವಿದ್ಯುತ್‌ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ಅಧಿಕಾರಿಗಳು ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಆನ್‌ಲೈನ್‌ ಬುಕ್ಕಿಂಗ್‌ :
ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಈ ಬಾರಿ ಆನ್‌ ಲೈನ್‌ ಬುಕಿಂಗ್‌ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು. ಹೂವಿನ ಅಲಂಕಾರವನ್ನು ಕಳೆದ ಬಾರಿಗಿಂತ ವಿಭಿನ್ನವಾಗಿ ಮಾಡಿಸಲು ಪ್ರಯತ್ನಿಸಿ ಎಂದು ತಿಳಿಸಿದರು.

ಪ್ಯಾಕೇಜ್‌ ಟೂರ್‌ :
ಪ್ರವಾಸಿಗರು ಹಾಸನ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅನುಕೂಲವಾಗುವಂತೆ ಕೆ.ಎಸ್‌‍.ಆರ್‌.ಟಿ.ಸಿ. ಬಸ್‌‍ಗಳಲ್ಲಿ ಪ್ಯಾಕೇಜ್‌ ಟೂರ್‌ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ಯಾರ ಮೋಟರಿಂಗ್‌, ಪ್ಯಾರ ಗ್ಲೈಡಿಂಗ್‌ ಹಾಗೂ ಹಾಸನ ಬೈ ಸ್ಕೈ ಆಯೋಜನೆಗೆ ಕ್ರಮ ವಹಿಸಿ ಎಂದು ತಿಳಿಸಿದರಲ್ಲದೆ, ಚನ್ನಪಟ್ಟಣ ಕೆರೆ ಅಂಗಳದಲ್ಲಿ ನಿರ್ಮಿಸಿರುವ ವಿಹಾರ ಧಾಮದಲ್ಲಿ ಬೋಟಿಂಗ್‌ ವ್ಯವಸ್ಥೆಗೆ ಕೂಡ ನಿಗಾ ವಹಿಸಲು ಸೂಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೆಡಾಕೂಟ ಆಯೋಜನೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ನಗರದ ರಸ್ತೆಗಳ ಗುಂಡಿ ಮುಚ್ಚುವುದು ಹಾಗೂ ಸ್ವಚ್ಚತೆಗೆ ಗಮನ ಹರಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚೆಸ್ಕಾಂ ಸೂಪರಿಟೆಂಡೆಂಟ್‌ ಇಂಜಿನಿಯರ್‌ ಎಂ.ಕೆ.ಸೋಮಶೇಖರ್‌, ಉಪ ವಿಭಾಗಾಧಿಕಾರಿ ಮಾರುತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

Latest News