ಮಡಿಕೇರಿ,ಡಿ.15-ಪ್ರವಾಸಿ ಖಾಸಗಿ ಬಸ್‌ನ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ಸಂಪೂರ್ಣ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೇರಳ ನೋಂದಣಿಯ ಪ್ರವಾಸಿ ಖಾಸಗಿ ಬಸ್ ಇದಾಗಿದ್ದು, ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಪ್ರವಾಸಿಗರನ್ನು ವಿರಾಜಪೇಟೆ ಸಮೀಪ ಇಳಿಸಿ ವಾಪಸ್ ತೆರಳುತ್ತಿತ್ತು.ಆ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರೇ ಇದ್ದರು. ಬಸ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಮಾಕುಟ್ಟ ಬಳಿಯ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ಬಸ್ ಹಿಂಬದಿಯ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ಚಾಲಕ ಹಾಗೂ ನಿರ್ವಹಕ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ನೋಡ ನೋಡುತ್ತಿದ್ದಂತೆ ಬೆಂಕಿ ಸಂಪೂರ್ಣ ಬಸ್ ಪೂರ್ತಿ ಆವರಿಸಿ ಹೊತ್ತಿ ಉರಿದಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ವಾಹನದೊಂದಿಗೆ ಬಂದು ಬೆಂಕಿಯನ್ನು ನಂದಿಸಿದರಾದರೂ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಈ ಘಟನೆಯಿಂದಾಗಿ ಬೆಳಗ್ಗೆ ಕೊಡಗು, ಕೇರಳ, ಮಾಕುಟ್ಟ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳದಲ್ಲಿದ್ದ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ನಂತರ ಸುಗಮ ಸಂಚಾರಕ್ಕೆ ಅನವು ಮಾಡಿ ಕೊಟ್ಟರು.
