Monday, December 8, 2025
Homeಜಿಲ್ಲಾ ಸುದ್ದಿಗಳುದೊಡ್ಡಬಳ್ಳಾಪುರದಲ್ಲಿ ಸರಗಳ್ಳರ ಹಾವಳಿ

ದೊಡ್ಡಬಳ್ಳಾಪುರದಲ್ಲಿ ಸರಗಳ್ಳರ ಹಾವಳಿ

Chain snatchers in Doddaballapur

ದೊಡ್ಡಬಳ್ಳಾಪುರ,ಡಿ.7- ಕೆಲವು ದಿನಗಳಿಂದ ಸೈಲೆಂಟಾಗಿದ್ದ ಸರಕಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. 24 ಗಂಟೆಗಳಲ್ಲಿ ತಾಲೂಕು ಸೇರಿ ಮೂರು ಕಡೆ ಮಾಂಗಲ್ಯ ಸರ ಕಳುವಾಗಿರುವ ಘಟನೆಗಳು ನಡೆದಿವೆ.

ತಾಲೂಕಿನ ಮದಗೊಂಡನಹಳ್ಳಿಯಲ್ಲಿ ಹಸುಗಳಿಗೆ ಹೊಲದಿಂದ ಮೇವು ಹೊತ್ತು ತರುತ್ತಿದ್ದ ವೇಳೆ ಮಹಿಳೆಯನ್ನು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿದ ಸರಗಳ್ಳರು ಹಲ್ಲೆ ನಡೆಸಿ 6 ಗ್ರಾಂ. ತೂಕದ ಚಿನ್ನದ ತಾಳಿ ಹಾಗೂ ಗುಂಡನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭೈರಸಂದ್ರ ಪಾಳ್ಯ: ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಭೈರಸಂದ್ರ ಪಾಳ್ಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಜಮೀನಿಗೆ ಹಸು ಮೇಯಿಸಲು ತೆರಳಿದ್ದ ಮಹಿಳೆಯೊಬ್ಬರ ಬಳಿಗೆ ಬಂದ ಕಳ್ಳರು, ಆಕೆಯ ಕೊರಳಿನಲ್ಲಿದ್ದ ಸುಮಾರು 35 ಗ್ರಾಂ. ತೂಕದ 1 ಲಕ್ಷ 75 ಸಾವಿರ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.

ದಾಬಸ್‌‍ ಪೇಟೆ: ನೆಲಮಂಗಲ ತಾಲ್ಲೂಕಿನ ದಾಬಸ್‌‍ಪೇಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲೂ ಮಹಿಳೆಯೊಬ್ಬರ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾದ ಘಟನೆ ವರದಿಯಾಗಿದೆ. ಮೂರು ಸ್ಥಳಗಳಲ್ಲೂ ನಡೆದಿರುವ ಘಟನೆಗಳಲ್ಲಿ ಒಂದೇ ತಂಡದ ಕೈವಾಡವಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಸರಣಿ ಕಳ್ಳತನಗಳಿಂದ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News