Friday, January 23, 2026
Homeಜಿಲ್ಲಾ ಸುದ್ದಿಗಳುಬ್ಯಾನರ್‌ ತೆರವು ವಿಚಾರದಲ್ಲಿ ಸಂಘರ್ಷ, ಗ್ರಾ.ಪಂ. ಸದಸ್ಯನ ಭೀಕರ ಕೊಲೆ

ಬ್ಯಾನರ್‌ ತೆರವು ವಿಚಾರದಲ್ಲಿ ಸಂಘರ್ಷ, ಗ್ರಾ.ಪಂ. ಸದಸ್ಯನ ಭೀಕರ ಕೊಲೆ

Clashes over removal of banner Gram Panchayat member murderd

ಚಿಕ್ಕಮಗಳೂರು,ಡಿ.6- ದತ್ತ ಜಯಂತಿ ಬ್ಯಾನರ್‌ ತೆರವು ವಿಚಾರವಾಗಿ ಉಂಟಾಗಿದ್ದ ಗಲಾಟೆ,ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.ಮೃತನನ್ನುಗ್ರಾಮ ಪಂಚಾಯಿತಿ ಸದಸ್ಯ ಗಣೇಶ್‌ ಗೌಡ (40) ಎಂದು ಗುರುತಿಸಲಾಗಿದೆ.

ಕಾಂಗ್ರೆಸ್‌‍ನಲ್ಲಿ ಗುರುತಿಸಿಕೊಂಡಿದ್ದ ಗಣೇಶ್‌ ಗೌಡ ಕಲರಡಿ ಮಠದ ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಅಡ್ಡಗಟ್ಟಿದ ಹಂತಕರ ತಂಡ ಅವರ ಮೇಲೆ ಮಚ್ಚಿನಿಂದ ದಾಳಿ ನಡೆಸಿದೆ.

ಸಂಜಯ್‌, ಮಿಥುನ್‌ ಸೇರಿ ಹಲವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು ಇವರು ಸಂಘಟನೆಯೊಂದರ ಕಾರ್ಯಕರ್ತರು ಎನ್ನಲಾಗಿದೆ.

ಗಲಾಟೆಯಲ್ಲಿ ಆರೋಪಿ ಸಂಜಯ್‌ ಹಾಗೂ ಮತ್ತೊಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಆವರನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆ ಬಳಿಕ ಸಖರಾಯ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌‍ ಬಂದೋಬಸ್ತ್‌ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌‍ಪಿ ವಿಕ್ರಮ್‌ ಆಮ್ಟೆ ತಿಳಿಸಿದ್ದಾರೆ. ಗಲಾಟೆಯಲ್ಲಿ ಶಾಮೀಲಾದ ಇಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ನಂತರ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಆನಂದ್‌, ಬ್ಯಾನರ್‌ ತೆರವು ವಿಚಾರವಾಗಿ ಗಲಾಟೆ ನಡೆದಿದೆ. ನಂತರ ಗಣೇಶ್‌ ಅವರನ್ನು ಕರೆಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 8 ಜನರು ಶಾಮೀಲಾಗಿರುವ ಶಂಕೆ ಇದೆ. ಕೆಲವು ದಿನಗಳಿಂದಲೇ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸರು ಈವರೆಗೆ ಐವರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

Latest News