ಚಿಕ್ಕಮಗಳೂರು,ಡಿ.4- ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಗುಹೆಯಲ್ಲಿರುವ ದತ್ತ ಪಾದುಕೆಗಳ ದರ್ಶನದೊಂದಿಗೆ ಈ ವರ್ಷದ ದತ್ತ ಜಯಂತಿಗೆ ತೆರೆ ಬಿದ್ದಿದೆ.ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಹಾಗೂ ಭಕ್ತರು ದತ್ತಮಾಲಾಧಾರಿಗಳಾಗಿದ್ದು ಇಂದು ದತ್ತ ಪಾದುಕೆಗಳ ದರ್ಶನದೊಂದಿಗೆ ದತ್ತಮಾಲೆಯನ್ನು ವಿಸರ್ಜನೆ ಮಾಡಿದರು.
ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಶಿವರಾಜ್, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ಆಗಮಿಸಿದ್ದರು.
ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬ್ಯಾರಿಕೇಡ್ ಮೂಲಕ ಸರತಿ ಸಾಲಿನಲ್ಲಿ ನಿಂತು ದತ್ತ ಗುಹೆ ಪ್ರವೇಶಿಸಿದ ದತ್ತ ಭಕ್ತರು ದತ್ತ ಪಾದುಕೆಗಳ ದರ್ಶನ ಪಡೆದರು.ಗುಹೆಯ ಹೊರಭಾಗದಲ್ಲಿ ನಿರ್ಮಿಸಿದ ತಾತ್ಕಾಲಿಕ ಶೆಡ್‌ನಲ್ಲಿ ದತ್ತ ಚಿತ್ರಪಟ ಹಾಗೂ ದತ್ತ ವಿಗ್ರಹವನ್ನು ಇಡಲಾಗಿತ್ತು. ದತ್ತ ಹೋಮ, ಗಣ ಹೋಮ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದಲೂ ದತ್ತ ಭಕ್ತರು ವಿವಿಧ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಇರುಮುಡಿ ಹೊತ್ತು ಬಂದ ದತ್ತ ಭಕ್ತರು ದತ್ತ ಪಾದುಕೆಗಳ ದರ್ಶನದ ನಂತರ ಇರುಮುಡಿ ಅಲ್ಲಿಯೇ ನೀಡಿ ದತ್ತ ಮಾಲೆ ವಿಸರ್ಜನೆ ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ದತ್ತ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ದತ್ತಪೀಠಕ್ಕೆ ತೆರಳಿದರು. ದತ್ತ ಗುಹೆಯೊಳಗೆ ಮೊಬೈಲ್ ಕ್ಯಾಮೆರಾ ನಿಷೇಧಿಸಲಾಗಿತ್ತು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರಚಿಸಿದ್ದ ದತ್ತ ಪೀಠದ ವ್ಯವಸ್ಥಾಪನ ಸಮಿತಿಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿದೆ ಇದು ಮುಸಲಾನರನ್ನು ಖುಷಿ ಪಡಿಸಬೇಕೆನ್ನುವ ಹುನ್ನಾರ ಎಂದರು. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಯಾವುದೇ ಕೆಲಸವನ್ನು ನಾವು ಸಹಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದುಗಳ ಭಾವನೆಗೆ ನೋವುಂಟಾಗುವ ನೂರಾರು ಸಂಗತಿಗಳನ್ನು ಮಾಡುತ್ತದೆ ಇದರ ವಿರುದ್ಧ ನಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ ಎನ್ನುವುದು ನಾವು ಹಲವು ದಾಖಲೆಗಳ ಮೂಲಕ ಹೇಳಿದ್ದೇವೆ. ದರ್ಗಾ ಬೇಕೆಂದು ನಾವು ಎಲ್ಲೂ ಕೇಳುತ್ತಿಲ್ಲ ಕಂದಾಯ ದಾಖಲೆಗಳಲ್ಲಿರುವ ದರ್ಗಾವನ್ನು ಅವರೇ ತೆಗೆದುಕೊಳ್ಳಲಿ ಎನ್ನುವುದನ್ನು ಮೊದಲಿನಿಂದಲೂ ಹೇಳುತ್ತಿದ್ದೇವೆ. ನಮ ಧಾರ್ಮಿಕ ಭಾವನೆಗೆ ನೋವನ್ನು ಮಾಡುವ ಯಾವುದೇ ಸಂಗತಿಗಳನ್ನು ಸಹಿಸುವುದಿಲ್ಲ ಹಿಂದುಗಳಿಗೆ ಸೇರುವ ದತ್ತಪೀಠವನ್ನು ಪೂರ್ಣ ಪ್ರಮಾಣದಲ್ಲಿ ಹಿಂದುಗಳಿಗೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿದರು.
