ಕಾರವಾರ,ಡಿ.14– ಒಂಟಿಸಲಗವೊಂದ ರಸ್ತ ಮಧ್ಯ ನಿಂತು ಗಂಟೆಗಳ ಕಾಲ ದರ್ಬಾರ್ ನಡೆಸಿದ ಘಟನೆ ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಕೊಡಂಬಿ ಬಳಿ ನಡೆದಿದೆ. ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ಒಂಟಿಸಲಗವೊಂದು ನಿಂತಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಕಾತೂರು ಅರಣ್ಯ ವಲಯದಿಂದ ಬಂದಗಜರಾಜನು ಪಾಳಾ ಕೊಡಂಬಿ ರಸ್ತೆಯ ನಡುಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಹೋಗಿದ್ದರು.
ಭಯದಿಂದ ಯಾರೂ ಮುಂದೆ ಹೋಗದೆ ರಸ್ತೆಯಲ್ಲೇ ನಿಂತಿದ್ದರು.ಆನೆ ಮಾತ್ರ ಜನ ಅಥವಾ ವಾಹನಗಳ ಹಾರನ್ಗೆ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು.
ಈ ಅನಿರೀಕ್ಷಿತ ಅತಿಥಿಯನ್ನು ನೋಡಲು ಜಮಾಯಿಸಿದ್ದ ಜನರು, ಸಮಯ ಕಳೆಯಲು ಮೊಬೈಲ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡರು. ವಿಡಿಯೋ ಮಾಡುವವರಿಗೆ ಪೋಸ್ ನೀಡುವಂತೆ ನಿಂತಿದ್ದ ಆನೆಯು, ಯಾರಿಗೂ ತೊಂದರೆ ಮಾಡದೆ, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆಯಿತು.
ನಂತರ, ತನ್ನಷ್ಟಕ್ಕೆ ತಾನೇ ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು.
