ಮೈಸೂರು,ಡಿ.9- ಮನಿ ಲ್ಯಾಂಡ್ರಿಂಗ್‌ಗೆ ನಿಮ ಖಾತೆ ಬಳಕೆಯಾಗಿದೆ, ನಿಮ ಮೊಬೈಲ್‌ನಿಂದ ಅಶ್ಲೀಲ ವಿಡಿಯೋ, ಕಾನೂನು ಬಾಹಿರ ಜಾಹೀರಾತು, ಬೆದರಿಕೆ ಕರೆಗಳು ಹಾಗೂ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ 82.10 ಲಕ್ಷ ಲಪಟಾಯಿಸಿರುವ ಘಟನೆ ನಡೆದಿದೆ.
ವಿಜಯನಗರದ ನಿವಾಸಿಯಾದ ವೈದ್ಯ ರಾಜು ಎಂಬುವರೇ ಹಣ ಕಳೆದುಕೊಂಡ ವ್ಯಕ್ತಿ. ಸೈಬರ್ ವಂಚಕರು ವೈದ್ಯರಿಗೆ ಕರೆ ಮಾಡಿ ನವದೆಹಲಿಯ ಟೆಲಿಕಾಂ ರೆಗ್ಯುಲೇಷನ್ ಆಫ್ ಇಂಡಿಯಾ ನೋಟಿಫಿಕೇಷನ್ ಡಿಪಾರ್ಟ್‌ಮೆಂಟ್‌ನಿಂದ ಎಂದು ತಿಳಿಸಿ ನಿಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ನಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಬೆದರಿಸಿ ಬಾಂದ್ರ ಪೊಲೀಸ್ ಠಾಣೆಗೆ ಫೋನ್ ಮಾಡುವಂತೆ ಸೂಚನೆ ನೀಡಿದ್ದಾರೆ.
ವಂಚಕನ ಮಾತನ್ನು ನಂಬಿದ ವೈದ್ಯ ವಿಡಿಯೋ ಕಾಲ್ ಮಾಡಿದ್ದು, ಪೊಲೀಸ್ ಸಮವಸ್ತ್ರದಲ್ಲಿ ಕುಳಿತಿದ್ದ ವ್ಯಕ್ತಿ ಮನಿ ಲ್ಯಾಂಡ್ರಿಂಗ್‌ನಲ್ಲಿ ನಿಮ ಖಾತೆ ಬಳಕೆಯಾಗಿದೆ. ಅಲ್ಲದೆ ಅಕ್ರಮವಾಗಿ 2 ಕೋಟಿ ರೂ. ವ್ಯವಹಾರವಾಗಿದೆ ಎಂದು ಬೆದರಿಸಿದ್ದಾನೆ.
ನಿಮ ಆಸ್ತಿ ಪರಿಶೀಲನೆ ಮಾಡಬೇಕೆಂದು ತಿಳಿಸಿ ಖಾತೆಯ ವಿವರವನ್ನು ಪಡೆದುಕೊಂಡು ವಿವಿಧ ಬ್ಯಾಂಕ್‌ಗಳ ಖಾತೆಯಿಂದ 82.10 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.ಬ್ಯಾಂಕಿನಿಂದ ಏಕಾಏಕಿ ಹಣ ಕಡಿತವಾಗಿರುವ ಮೆಸೇಜ್ ಬಂದಾಗ ಆತಂಕಗೊಂಡ ವೈದ್ಯ ಕೂಡಲೇ ಖಾತೆಗಳನ್ನು ಬ್ಲಾಕ್ ಮಾಡಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನಲ್ಲಿ ದಿನನಿತ್ಯ ಒಂದಲ್ಲಾ ಒಂದು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವಿದ್ಯಾವಂತರು, ಬುದ್ಧಿವಂತರೇ ಜಾಲಕ್ಕೆ ಸಿಲುಕುತ್ತಿರುವುದು ವಿಪರ್ಯಾಸ.
ಯಾವುದೇ ಅನಮೇಧಯ ಕರೆ, ಬ್ಯಾಂಕಿನವರು, ಕಸ್ಟಮ್‌ನವರು, ಪೊಲೀಸಿನವರು ಎಂದು ಹೇಳಿಕೊಂಡು ಕರೆ ಮಾಡಿದರೆ ಯಾವುದೇ ಕಾರಣಕ್ಕೂ ಮಾಹಿತಿ ನೀಡಬೇಡಿ.ಬ್ಯಾಂಕ್‌ನಿಂದ ಯಾರೂ ಕೂಡ ಕರೆ ಮಾಡುವುದಿಲ್ಲ. ಹಾಗೇನಿದ್ದರೂ ಸಮಸ್ಯೆಯಿದ್ದರೆ ಶಾಖೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಜೊತೆಗೆ ಮೊಬೈಲ್‌ನಲ್ಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಆದಷ್ಟು ಸೈಬರ್ ವಂಚಕರಿಂದ ಸುರಕ್ಷಿತವಾಗಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
