ತುಮಕೂರು,ಜ.5- ತಾಲ್ಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಅಂತರದಲ್ಲಿ 11 ವಾನರಗಳು ನಿಗೂಢವಾಗಿ ಮೃತಪಟ್ಟಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ.
ದೇವರಾಯನದುರ್ಗ ಹಾಗೂ ದುರ್ಗದಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ 11 ವಾನರಗಳ ಮೃತದೇಹಗಳು ಪತ್ತೆಯಾಗಿವೆ. ರಸ್ತೆಬದಿ ಸತ್ತುಬಿದ್ದಿದ್ದ ವಾನರಗಳನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಮೊದಲ ದಿನ 7 ವಾನರಗಳ ಶವ, 2ನೇ ದಿನದಲ್ಲಿ 4 ವಾನರಗಳ ಶವ ಪತ್ತೆಯಾಗಿದ್ದು, 11 ಮೃತದೇಹಗಳಲ್ಲಿ 9 ಸಾಮಾನ್ಯ ಕೋತಿಗಳಾಗಿದ್ದು, 2 ಲಂಗೂರ ಪ್ರಭೇದದ ಕೋತಿಗಳು ಎನ್ನಲಾಗಿದೆ.
ಕೋತಿಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಯಾಂಪಲ್‌ಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿಭಾಗಕ್ಕೆ ಕಳುಹಿಸಲಾಗಿದೆ.
