ಮೈಸೂರು, ಜ. 4- ನಂಜನಗೂಡಿನಲ್ಲಿ ನಿನ್ನೆ ರಾತ್ರಿ ನಡೆದ ಅಂಧಕಾಸುರ ವಧೆ ಪೂಜಾ ಕೈಂಕರ್ಯ ವೇಳೆ ಅರ್ಚಕರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಅರ್ಚಕ ಉಪಾಧ್ಯಾಯ(55) ಸಾವನ್ನಪ್ಪಿದವರು.
ನಿನ್ನೆ ರಾತ್ರಿ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಪೂಜಾ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು.
ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ ಹೊತ್ತುತಂದರು. ಮಂತ್ರ ಘೋಷಗಳು ಮುಗಿಲು ಮುಟ್ಟಿತ್ತು.
ಭಾವಚಿತ್ರದ ಮೇಲೆ ಪಲ್ಲಕ್ಕಿ ಬರುತ್ತಿದ್ದಂತೆ ಸ್ವಲ್ಪ ದೂರದಲ್ಲಿ ನಿಂತಿದ್ದ ಅರ್ಚಕ ಉಪಾಧ್ಯಾಯರವರು ಪಲ್ಲಕ್ಕಿಯನ್ನು ತಮ ಭುಜದ ಮೇಲೆ ಹೊರಲು ಮುಂದೆ ಬಂದು ಭುಜ ಕೊಟ್ಟ ಕೆಲವೇ ಸೆಕೆಂಡ್‌ಗಳಲ್ಲಿ ಕುಸಿದು ಬಿದ್ದರು.
ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯರವರ ನೆರವಿಗೆ ಧಾವಿಸಿದರು. ಕೂಡಲೇ ಶುಶ್ರೂಷೆ ನೀಡಿ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಸದ್ಯ ಇದೀಗ ಶ್ರೀಕಂಠೇಶ್ವರನ ದೇವಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ.
