ಮೈಸೂರು, ಡಿ.26- ಅರಮನೆ ಆವರಣದ ಮಾರ್ತಾಂಡ ದ್ವಾರದ ಬಳಿ ನಿನ್ನೆ ರಾತ್ರಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಬಲೂನ್‌ಅನ್ನು ಮಾರಾಟ ಮಾಡಲು ತಂದಿದ್ದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಉತ್ತರ ಪ್ರದೇಶ ಮೂಲಕ ಸಲೀಂ ಎಂಬಾತ ಮೃತಪಟ್ಟಿದ್ದು, ಆತನನ್ನು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನೋಡಿರುವುದಾಗಿ ಸ್ಥಳೀಯ ವರ್ತಕರು ತಿಳಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದಲ್ಲದೇ ಸ್ಫೋಟದ ತೀವ್ರತೆಯನ್ನು ಅರಿತಿರುವ ರಾಷ್ಟ್ರೀಯ ತನಿಖಾಧಿಕಾರಿಗಳೂ ಕೂಡ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.ಪ್ರತಿನಿತ್ಯ ಮೈಸೂರಿನ ಅರಮನೆ ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಿರುತ್ತಾರೆ. ಇದೇ ಸಮಯದಲ್ಲೇ ಈ ಸ್ಫೋಟ ನಡೆಸಿರುವುದು ಆತಂಕ ಸೃಷ್ಟಿಸಿದ್ದು, ಇದರ ಹಿಂದೆ ದುಷ್ಕೃತ್ಯದ ಸಂಚಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಸಾಮಾನ್ಯವಾಗಿ ಅರಮನೆ ಬಳಿ ಬಿಗಿ ಭದ್ರತೆಯಿರುತ್ತದೆಯಲ್ಲದೇ ಅಲ್ಲಿಗೆ ಯಾವುದೇ ಸ್ಫೋಟಕದಂತಹ ವಸ್ತುಗಳ ಸಾಗಾಟಕ್ಕೆ ಅವಕಾಶವಿರುವುದಿಲ್ಲ ಆದರೆ, ಈ ವ್ಯಕ್ತಿ ಇದನ್ನು ಅಲ್ಲಿಗೆ ಹೇಗೆ ತಂದಿದ್ದ? ಮೈಸೂರಿಗೆ ಈತ ಹೇಗೆ, ಏತಕ್ಕೆ ಬಂದಿದ್ದ? ಎಲ್ಲಿ ನೆಲೆಸಿದ್ದ ? ಎಂಬುದರ ಬಗ್ಗೆ ಪೊಲೀಸರ ವಿಶೇಷ ತಂಡ ತನಿಖೆ ಆರಂಭಿಸಿದೆ.
ಎನ್‌ಐಎ ಅಧಿಕಾರಿಗಳು ಕೂಡ ತನಿಖೆ ಕೈಗೊಂಡಿದ್ದು, ಸಲೀಂನ ಪೂರ್ವಾಪರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಮೈಸೂರಿನಲ್ಲಿ ನಡೆದಿರುವಂತಹ ಈ ಸ್ಫೋಟ ಹತ್ತು-ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರಲ್ಲಿ ಕೋಟ್ರೇಶ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ, ಈ ವ್ಯಕಿಹಲವು ದಿನಗಳ ಹಿಂದೆ ಮತ್ತೊಬ್ಬನ ಜತೆ ಮೈಸೂರಿಗೆ ಬಂದು ಲಾಡ್‌್ಜವೊಂದರಲ್ಲಿ ನೆಲೆಸಿದ್ದ ಎಂಬುದು ತಿಳಿದುಬಂದಿದೆ.
