ತಿ.ನರಸೀಪುರ,ಜ.24-ಹುಡುಗಿಯನ್ನು ಕರೆದುಕೊಂಡ ಹೋಗಿದ್ದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಪೋಲೀಸ್ ಠಾಣಾ ವ್ಯಾಪ್ತಿಯ ಚಿದರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಚಿದರವಳ್ಳಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರ ಚಿನ್ನಸ್ವಾಮಿ(24) ಎಂಬುವರೇ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಪಟ್ಟಿರುವ ವ್ಯಕ್ತಿ.ಚಿನ್ನಸ್ವಾಮಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಇಲ್ಲದ ಹಿನ್ನೆಲೆಯಲ್ಲಿ ಚಿದರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಒಳಗಿನ ಪಡಸಾಲೆಯಲ್ಲಿ ತಮ ತಂದೆ ತಾಯಿಯೊಂದಿಗೆ ಬಂದು ಮಲಗುತ್ತಿದ್ದನು.
ಚಿನ್ನಸ್ವಾಮಿ ಮೇಲೆ ಪಟ್ಟಣ ಪೋಲೀಸ್ ಠಾಣೆಯಲ್ಲಿ ಕಳ್ಳತನದ ಕೇಸ್ ದಾಖಲಾಗಿತ್ತಲ್ಲದೇ ಆರು ತಿಂಗಳ ಹಿಂದೆ ನಂಜನಗೂಡು ತಾಲೂಕು ಕೌಲಂದೆ ಪೋಲೀಸ್ ಠಾಣೆಯಲ್ಲಿ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಕೇಸು ದಾಖಲಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಒಂದು ವಾರದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.
ಚಿನ್ನಸ್ವಾಮಿ ಎಂದಿನಂತೆ ಕೂಲಿ ಕೆಲಸ ಮಾಡಿ ರಾತ್ರಿ ಶಾಲಾ ಕಾಂಪೌಂಡ್ ಒಳಗಿನ ಪಡಸಾಲೆಯಲ್ಲಿ ಮಲಗಿದ್ದನು. ಬೆಳಿಗ್ಗೆ ನೋಡಿದಾಗ ಕಟ್ಟಡದ ಜಂತಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.
ಕೂಡಲೇ ನೇಣು ಬಿಗಿದ ಲುಂಗಿಯನ್ನು ಕತ್ತರಿಸಿ ಕೆಳಗಿಳಿಸಿದ್ದಾರೆ.ನಂತರ ಕತ್ತಿಗೆ ಬಿಗಿದಿದ್ದ ಲುಂಗಿಯನ್ನು ಚಾಕುವಿನಿಂದ ಕತ್ತರಿಸುವ ಸಂಧರ್ಭದಲ್ಲಿ ಆಕಸಿಕವಾಗಿ ಚಾಕು ಕತ್ತಿಗೆ ತಾಗಿ ರಕ್ತ ಸೋರಿಕೆಯಾಗಿದೆ.ಚಿನ್ನಸ್ವಾಮಿ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸುವಂತೆ ಆತನ ಚಿಕ್ಕಪ್ಪ ಮಹದೇವ ಎಂಬುವವರು ಪಟ್ಟಣ ಪೋಲಿಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪಿಎಸ್‌ಐ ಜಗದೀಶ್ ದೂಳ್ ಶೆಟ್ಟಿ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.
