ಬೆಂಗಳೂರು. ಅ.26– ಬೆಂಗಳೂರಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲ ಸಲ್ಲದ ಟೀಕೆ ಮಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಕಬ್ಬನ್‌ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ವೇಳೆ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.
ಈ ವೇಳೆ ನಾಗರಿಕರೊಬ್ಬರು, ಸರ್ಕಾರ ಎಲ್ಲಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಎ ಖಾತಾ ನಿಮ ಆಸ್ತಿ ದಾಖಲೆ.
ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ ಸರ್ಕಾರದ ಆರನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ ಶೇ. 5 ಮಾತ್ರ ಅಭಿವೃದ್ಧಿ ಶುಲ್ಕ ಪಾವತಿ ಮಾಡುವಂತೆ ಕೇಳಿದ್ದೇವೆ. ನಿಮಂತಹ ಪ್ರಜ್ಞಾವಂತ ನಾಗರಿಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದ ಎಂದು ಕೈ ಮುಗಿದು ನಮಿಸಿದರು. ಮತ್ತೊಬ್ಬ ನಾಗರಿಕರು ಸುರಂಗ ರಸ್ತೆ ಯೋಜನೆಯನ್ನು ಬೆಂಬಲಿಸಿ ಮಾತನಾಡಿದರು. ಕಳೆದ 30 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಒಳ್ಳೆಯ ಯೋಜನೆ ಇಲ್ಲ ಎಂದು ಹೇಳಿದರು.
ಈ ವೇಳೆ ಡಿ.ಕೆ.ಶಿವಕುಮಾರ್ ಅವರು ನಿಮ ಬೆಂಬಲಕ್ಕೆ ಧನ್ಯವಾದಗಳು ಎಂದು ನಾಗರಿಕರಿಗೆ ಹೇಳಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಪರ್ಯಾಯ ಅಲೋಚನೆಗಳು ಸಾಧುವಾಗಿಲ್ಲ. ರಸ್ತೆ ಅಗಲೀಕರಣ ಮಾಡಲು, ಮನೆಗಳನ್ನು ಹೊಡೆಯಲು ಸಾಧ್ಯವಿಲ್ಲ. ಅದಕ್ಕೆ ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಸುರಂಗ ರಸ್ತೆ ನಿರ್ಮಿಸುತ್ತಿದ್ದೇವೆ ಎಂದರು.
12,500 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ನಾಗರಿಕರೊಬ್ಬರು, ಕಾಂಗ್ರೆಸ್ ಪಕ್ಷವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಪಕ್ಷದ ಹೆಸರು ಹೇಳಬೇಡಿ, ಸಮಸ್ಯೆಗಳನ್ನು ಮಾತ್ರ ವಿವರಿಸಿ ಎಂದು ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು. ಪೌರಕಾರ್ಮಿಕರಿಗೆ ಮನೆ ಕಟ್ಟಿಸಿ ಕೊಡಿ ಎಂದು ಮನವಿ ಮಾಡಿದರು. ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇದಕ್ಕಾಗಿ ಧನ್ಯವಾದ ಹೇಳುವುದಾಗಿ ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸುರಂಗ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಡಿ ಎಂದು ಒತ್ತಾಯಿಸಿದರು.
330 ಎಕರೆಯಿದ್ದ ಕಬ್ಬನ್‌ಪಾರ್ಕ್ ವಿಸ್ತೀರ್ಣ ಈಗ 196 ಎಕರೆಯಾಗಿದೆ. ಲಾಲ್‌ಬಾಗ್ ಮಾದರಿಯಲ್ಲೇ ಈ ಉದ್ಯಾನವನ್ನು ಅಭಿವೃದ್ಧಿ ಮಾಡಿ ಆದಾಯ ಬರುವಂತೆ ಮಾಡಬಹುದು. ಭೋಗ್ಯದಲ್ಲಿರುವ ಕಟ್ಟಡಗಳನ್ನು ತೆರವು ಮಾಡಿಸಿ, ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದೆ. ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ 2, 3 ಕೋಟಿ ರೂ. ಹಣ ಪಡೆದು ಟಿಕೆಟ್ ನೀಡಲಾಗುತ್ತಿದೆ ಎಂಬ ಆರೋಪಗಳಿವೆ ಎಂದು ಸಾರ್ವಜನಿಕರೊಬ್ಬರು ಹೇಳಿದಾಗ ಮಧ್ಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್ ಅವರು, ಯಾವ ಪಕ್ಷವೂ ಹಣ ಪಡೆದು ಚುನಾವಣೆಯಲ್ಲಿ ಟಿಕೆಟ್ ನೀಡಿದ್ದನ್ನು ನಾನು ಕಂಡಿಲ್ಲ, ಪಕ್ಷದ ಶುಲ್ಕವನ್ನಾಗಿ ಸಾವಿರ, 50 ಸಾವಿರದಷ್ಟು ಹಣ ಪಡೆಯಬಹುದಷ್ಟೆ. ಟಿಕೆಟ್ ಮಾರಿ ಕೊಂಡಿರುವುದಿಲ್ಲ. ಒಂದು ವೇಳೆ ಅಂತಹ ನಿದರ್ಶನಗಳಿದ್ದರೆ ಲಿಖಿತವಾಗಿ ದೂರು ಕೊಡಿ. ಸಂಜೆಯೇ ತನಿಖೆಗೆ ಆದೇಶಿಸುತ್ತೇನೆ ಎಂದರು.
20 ವರ್ಷಗಳಿಂದಲೂ ಒಬ್ಬರೇ ಪಾಲಿಕೆ ಸದಸ್ಯರಿರುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಅದೇ ನಾಗರಿಕರು ಹೇಳಿದಾಗ, ನಾನು 35 ವರ್ಷದಿಂದ ಶಾಸಕನಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು. ವೈದ್ಯರಿಗೆ, ಎಂಜಿನಿಯರ್‌ಗಳಿಗೆ, ಮಾಜಿ ಸೈನಿಕರಿಗೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಕೊಡಿ ಎಂದು ನಾಗರಿಕರು ಸಲಹೆ ನೀಡಿದರು.
ಚುನಾವಣೆಯಲ್ಲಿ ಸ್ಪರ್ಧಿಸುವವರಿಂದ ಅರ್ಜಿ ಅಹ್ವಾನಿಸುತೇನೆ. ಆಗ ನೀವು ಅರ್ಜಿ ಹಾಕಿ. ಜನರ ಸಂಪರ್ಕದಲ್ಲಿರುವವರು, ಪಕ್ಷದ ಕಾರ್ಯಕರ್ತರ ಜೊತೆ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಅಂಗವಿಕಲರ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಪದಶ್ರೀ ಡಾ. ಕೆ.ಎಸ್.ರಾಜಣ್ಣ, ಭಗವದ್ಗೀತೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡುವ ಮೂಲಕ ನಿಮ ಮನದಲ್ಲಿನ ಬಯಕೆ ಈಡೇರಲಿ ಎಂದು ಹಾರೈಸಿದರು. ಪುಲಕೇಶಿ ನಗರದ ಮೆಟ್ರೋ ನಿಲ್ದಾಣಕ್ಕೆ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಕಬ್ಬನ್‌ಪಾರ್ಕ್ ನಡಿಗೆಯಲ್ಲಿ ಡಿ.ಕೆ.ಶಿವಕುಮಾರ್, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು, ಸೆಲ್ಫಿ ಕ್ಲಿಕ್ಕಿಸಿದರು, ವಾಯು ವಿಹಾರಿಗಳು ಕರೆ ತಂದ ಸಾಕು ಪ್ರಾಣಿಗಳನ್ನು ಕಂಡು ಡಿ.ಕೆ.ಶಿವಕುಮಾರ್ ಖುಷಿ ಪಟ್ಟರು.
