Saturday, November 8, 2025
Homeಇದೀಗ ಬಂದ ಸುದ್ದಿಆಯೋಗ ದಾಖಲೆ ನೀಡಿದರೆ ಪ್ರಮಾಣ ಪತ್ರ ಸಲ್ಲಿಸಲು ಸಿದ್ಧ : DCM ಡಿ.ಕೆ.ಶಿವಕುಮಾರ್‌

ಆಯೋಗ ದಾಖಲೆ ನೀಡಿದರೆ ಪ್ರಮಾಣ ಪತ್ರ ಸಲ್ಲಿಸಲು ಸಿದ್ಧ : DCM ಡಿ.ಕೆ.ಶಿವಕುಮಾರ್‌

ಬೆಂಗಳೂರು, ನ.8- ಮತಗಳ್ಳತನ ಪ್ರಕರಣದಲ್ಲಿ ಚುನಾವಣಾ ಆಯೋಗ ನಾವು ಕೇಳಿದ ಎಲ್ಲಾ ಮಾಹಿತಿಗಳನ್ನು ಮೊದಲು ನೀಡಲಿ ನಂತರ ಆಯೋಗ ಕೇಳುವ ಪ್ರಮಾಣ ಪತ್ರವನ್ನು ಸಲ್ಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಮತಗಳ್ಳತನದ ವಿರುದ್ಧ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 300 ಮಂದಿ ಸಂಸದರು ದೆಹಲಿಗೆ ಹೋಗಿ ಸಮಯ ಕೇಳಿದ್ದಾರೆ, ಆಯೋಗ ಸ್ಪಂದಿಸುತ್ತಿಲ್ಲ. ನಾವು ಹಗರಣವನ್ನು ಹೊರ ತಂದ ಬಳಿಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಆಯೋಗ ಮುಂದಾಗಿದೆ ಎಂದು ಲೇವಡಿ ಮಾಡಿದರು.

ಮತಗಳ್ಳತನದ ಮಾಹಿತಿಯನ್ನು ಪೂರ್ಣವಾಗಿ ನಾವು ಬಹಿರಂಗ ಪಡಿಸಿದರೆ ಅಲ್ಲೋಲ್ಲಕಲ್ಲೋಲವಾಗಲಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಮತಗಳ್ಳತನವನ್ನು ಮುಚ್ಚಿ ಹಾಕುತ್ತಾರೆ, ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟು ಚುನಾವಣೆ ಬರಲಿ ಎಂದು ಸವಾಲು ಹಾಕಿದರು. ಚುನಾವಣೆಯಲ್ಲಿ ನಾನು ಮತ್ತು ತಮ ಪತ್ನಿ ಮತದಾನ ಮಾಡಿ ಜೊತೆಯಾಗಿ ನಿಂತು ಪೋಟೋ ತೆಗೆಸಿಕೊಂಡಿದ್ದಕ್ಕೆ ಮತದಾರರ ಪಟ್ಟಿಯಿಂದಲೇ ನನ್ನ ಹೆಸರನ್ನು ಡಿಲಿಟ್‌ ಮಾಡಲಾಗಿತ್ತು. ಅಂತಹ ಆಯೋಗ ಈಗ ಮತಗಳ್ಳತನವನ್ನು ತನಿಖೆ ಮಾಡುತ್ತಿಲ್ಲ, ಕೊನೆಗೆ ಕಾಂಗ್ರೆಸ್‌‍ ಪಕ್ಷವೇ ತನಿಖೆ ಮಾಡುತ್ತಿದೆ ಎಂದರು ಹೇಳಿದರು.

ಮತಗಳ್ಳತನದ ಭಾಗವಾಗಿ ಒಂದು ಮತವನ್ನು ಪಟ್ಟಿಯಿಂದ ಕಿತ್ತು ಹಾಕಿದರೆ 80 ರೂಪಾಯಿ ನೀಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಮಹದೇವಪುರ ಕ್ಷೇತ್ರದಲ್ಲಿ 1.30 ಲಕ್ಷ ಮತಗಳ ಕಳ್ಳತನವಾಗಿರುವುದನ್ನು ಪತ್ತೆ ಹಚ್ಚಲಾಗಿತ್ತು. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಂದೋಲನ ಆರಂಭಿಸಲಾಯಿತು. ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮತಗಳ್ಳತನವಾಗಿದೆ ಎಂದು ಹೇಳಿದರು.

ಒಂದು ಕ್ಷೇತ್ರದಲ್ಲಿ 2.40 ಲಕ್ಷ ಮತಗಳಿದ್ದರೆ, ಕಾಂಗ್ರೆಸ್‌‍ ಪಕ್ಷಕ್ಕೆ ಮತ ಹಾಕುವ ಅಲ್ಪಸಂಖ್ಯಾತರು, ದಲಿತರ ಮತಗಳನ್ನು ಪಕ್ಕದ ಕ್ಷೇತ್ರಕ್ಕೆ ಸ್ಥಳಾಂತರಿಸಿ ಅನ್ಯಾಯ ಮಾಡಲಾಗಿದೆ. ಚಿಲುಮೆ ಸಂಸ್ಥೆಯ ಹಗರಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾಧಿಕಾರಿಗಳೇ ದೂರು ದಾಖಲಿಸಿದ್ದರು. ತನಿಖೆಯಾಗಿ ಕೆಲವರನ್ನು ಅಮಾನತುಗೊಳಿಸಲಾಗಿತ್ತು, ಕೆಲ ಸಮಯದ ನಂತರ ಕೆಲವರು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ವಿವರಿಸಿದರು.
ಆಳಂದದಲ್ಲಿ ಪಿಡಿಒ ಹೆಣ್ಣುಮಗಳೊಬ್ಬರು ಮತಗಳ್ಳತನವನ್ನು ಪತ್ತೆ ಹಚ್ಚಿದ್ದರು. ಅಲ್ಲಿ ಜಿಲ್ಲಾಧಿಕಾರಿಯವರೇ ತನಿಖೆ ಮಾಡಿಸಿದ್ದರು. ಚುನಾವಣೆ ನಡೆಯುವ ದಿನ ಬೆಳಗಿನ ಜಾವ 4 ಗಂಟೆ ಸಮಯದಲ್ಲೂ ಕೆಲವರ ಹೆಸರನ್ನು ಕೈ ಬಿಡಲಾಗಿತ್ತು. 6100 ಮತದಾರರ ಹೆಸರನ್ನು ಕೈ ಬಿಡುವ ಪ್ರಯತ್ನಗಳಾಗಿತ್ತು. 256 ಬೂತ್‌ಗಳಲ್ಲಿ 7250 ಮತಗಳನ್ನು ಕೈ ಬಿಡಲು ಅರ್ಜಿ ಸಲ್ಲಿಕೆಯಾಗಿತ್ತು ಎಂದು ಹೇಳಿದರು.

ಜಿಲ್ಲಾಧಿಕಾರಿ ಸೇರಿ ಬಹುತೇಕ ಅಧಿಕಾರಿಗಳು ರಾಜ್ಯ ಸರ್ಕಾರದವರೇ ಆಗಿದ್ದರೂ ಚುನಾವಣಾ ಆಯೋಗದ ಅಧೀನವಾಗಿ ಕೆಲಸ ಮಾಡುತ್ತಾರೆ. ಆಳಂದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆ ನಡೆಯುತ್ತಿದೆ. ಹೊರ ರಾಜ್ಯದವರ ಫೋನ್‌ ನಂಬರ್‌ ಬಳಕೆ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಡಿಲಿಟ್‌ ಮಾಡುವ ಪ್ರಯತ್ನ ನಡೆದಿದೆ. ಗರುಡ ಆ್ಯಪ್‌ ಬಳಕೆ ಮಾಡಿ, ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಜಾರ್ಖಂಡ್‌ ಮೂಲದ ವ್ಯಕ್ತಿಗಳ ಪೋನ್‌ ನಂಬರ್‌ ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಡಲು ಅರ್ಜಿ ಸಲ್ಲಿಸಲಾಗಿದೆ. ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಎಸ್‌‍ಐಟಿ ಪೊಲೀಸರು ತನಿಖೆ ನಡೆಸಿ ಹೊರ ರಾಜ್ಯದ 9 ಪೋನ್‌ ನಂಬರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಎಸ್‌‍ಐಟಿ ತನಿಖೆಯ ವೇಳೆ ಆಳಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್‌ ಗುತ್ತೇದಾರ್‌ ಕೆಲ ದಾಖಲೆಗಳನ್ನು ಸುಟ್ಟು ಹಾಕಿರುವುದು ಪತ್ತೆಯಾಗಿದೆ. ಪ್ರತಿಯೊಂದು ಮತದ ಡಿಲಿಟ್‌ ಗೆ 80 ರೂಪಾಯಿ ದರ ನೀಡುತ್ತಿರುವುದಾಗಿ ತಿಳಿದು ಬಂದಿದೆ ಎಂದು ವಿವರಿಸಿದರು.

ರಾಹುಲ್‌ ಗಾಂಧಿ ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗೆ ಹೋರಾಟ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್‌‍ ಪಕ್ಷದ ಹೋರಾಟ ಮಾತ್ರವಲ್ಲ, ಜನರ ಆಂದೋಲನ. ಜನರ ಅಭಿಪ್ರಾಯಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ದೇಶದ ಉದ್ದಗಲಕ್ಕೂ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿತ್ತು. ಮುಖ್ಯಮಂತ್ರಿ ಹಾಗೂ ತಾವು ಇದರಲ್ಲಿ ಭಾಗವಹಿಸಿದ್ದೇವೆ. ರಾಜ್ಯದಲ್ಲಿ 1,12,41000 ಸಹಿ ಸಂಗ್ರಹಿಸಲಾಗಿದೆ. ಇದೇ ತಿಂಗಳ 10ರಂದು ದೆಹಲಿಗೆ ತಲುಪಿಸುತ್ತೇವೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಕಾಂಗ್ರೆಸ್‌‍ ಸಮಾವೇಶವನ್ನು ಆಯೋಜಿಸಲು ತಯಾರಿಗಳಾಗಿವೆ. ಯಾರ್ಯಾರು ಏನೇನು ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಮ ಬಳಿ ಇದೆ. ಸಹಿ ಸಂಗ್ರಹವನ್ನು ಬೂತ್‌ ಮಟ್ಟದಲ್ಲಿ ನಡೆಸಲಾಗಿದೆ. ದೇಶದಲ್ಲೇ ಕರ್ನಾಟಕ ಸಹಿ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ವಿಧಾನ ಪರಿಷತ್‌ ನ ಮುಖ್ಯ ಸಚೇತಕ ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌, ಶಾಸಕರಾದ ಬಿ.ಶಿವಣ್ಣ, ಶ್ರೀನಿವಾಸ್‌‍ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

Latest News