Friday, March 7, 2025
Homeರಾಜ್ಯಸಿಎಂ ಬದಲಾವಣೆ ಚರ್ಚೆ ನಡುವೆಯೇ ಡಿಕೆಶಿ - ಖರ್ಗೆ ಸುದೀರ್ಘ ಚರ್ಚೆ

ಸಿಎಂ ಬದಲಾವಣೆ ಚರ್ಚೆ ನಡುವೆಯೇ ಡಿಕೆಶಿ – ಖರ್ಗೆ ಸುದೀರ್ಘ ಚರ್ಚೆ

ಬೆಂಗಳೂರು,ಮಾ.4- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಗರದಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಪಕ್ಷ ಸಂಘಟನೆ, ಶಿಸ್ತುಪಾಲನೆ, ನೂತನ ಕಚೇರಿಗಳ ನಿರ್ಮಾಣ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಈ ಸಂದರ್ಭದಲ್ಲಿ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಡಿ.ಕೆ.ಶಿವಕುಮಾರ್‌ ಅವರು ಇತ್ತೀಚೆಗೆ ಹಲವಾರು ಹೇಳಿಕೆಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಸಚಿವ ಕೆ.ಎನ್‌.ರಾಜಣ್ಣ ನೇರವಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಶಿಸ್ತು ಉಲ್ಲಂಘನೆ ಮಾಡುತ್ತಿರುವುದು ಜಗಜ್ಜಾಹೀರ.

ಇನ್ನು ಸಚಿವ ಸತೀಶ್‌ ಜಾರಕಿಹೊಳಿ, ಪರಮೇಶ್ವರ್‌ರವರು ಪ್ರತ್ಯೇಕ ಸಭೆ ಹಾಗೂ ಗುಂಪುಗಾರಿಕೆ ಮೂಲಕ ನಾಯಕತ್ವದ ಕುರಿತಂತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಇವರ್ಯಾರೂ ಸೊಪ್ಪು ಹಾಕುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ತಿಳಿ ಹೇಳಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ. ರಾಜಣ್ಣ ಮತ್ತು ಹಿರಿಯ ಸಚಿವರು ತಮ ಅಭಿಪ್ರಾಯ ಹೇಳಿದ್ದಾರೆ. ಇದರಲ್ಲಿ ತಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.

ಹೀಗಾಗಿ ಸಚಿವರಿಗೆ ಕಡಿವಾಣ ಇಲ್ಲದಂತಾಗಿ ಶಿಸ್ತು ಮರೀಚಿಕೆಯಾಗಿದೆ. ಡಿ.ಕೆ.ಶಿವಕುಮಾರ್‌ರವರು ಇಂದು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ವೇಳೆ ಹದ್ದುಮೀರಿದ ಸಚಿವರ ನಡವಳಿಕೆಗಳಿಗೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಿವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಈಶಾ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ಷೇಪಗಳು ಕೇಳಿಬಂದಿವೆ. ಸದ್ಗುರು ಜಗ್ಗಿ ವಾಸುದೇವರವರು ರಾಹುಲ್‌ಗಾಂಧಿ ಯಾರು? ಗೊತ್ತಿಲ್ಲ ಎಂದಿದ್ದಾರೆ. ಅಂತಹ ವ್ಯಕ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಷ್ಟು ಸರಿ ಎಂದು ಡಿ.ಕೆ.ಶಿವಕುಮಾರ್‌ರವರೇ ಹೇಳಬೇಕು ಎಂದು ರಾಜಣ್ಣ ಪ್ರಶ್ನಿಸಿದ್ದರು. ಈ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್‌ ರವರು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಸುದೀರ್ಘ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿ ಕಾಂಗ್ರೆಸ್‌‍ ಮಹಾಧಿವೇಶನ ನಡೆದು 100 ವರ್ಷಗಳಾಗಿದ್ದು, ಮಹಾತ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌‍ ಅಧಿವೇಶನದ ನೆನಪಿಗಾಗಿ 100 ಕಚೇರಿಗಳನ್ನು ನಿರ್ಮಾಣ ಮಾಡಲು ಕಾಂಗ್ರೆಸ್‌‍ ಪಕ್ಷ ಮುಂದಾಗಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ಹಾಗೂ ರೂಪುರೇಷೆಗಳ ಬಗ್ಗೆಯೂ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದ್ದು, ಅದರಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಕೂಡ ಇಬ್ಬರು ನಾಯಕರು ಸಮಾಲೋಚನೆ ನಡೆಸಿದ್ದಾರೆ.

RELATED ARTICLES

Latest News