ಬೆಂಗಳೂರು,ಮಾ.29- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಂದಿನ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಕೇಳಿ ಬಂದಿದ್ದ ಸಿ.ಡಿ ಪ್ರಕರಣದ ಹಿಂದೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳೇ ಪ್ರಮುಖ ರೂವಾರಿಗಳೆಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಟೋಟಕ ಆರೋಪ ಮಾಡಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಅವರು. ಡಿಕೆಶಿ ಜತೆ ಸೇರಿ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಈಗ ಎದ್ದಿರುವ ಹನಿಟ್ರ್ಯಾಪ್ ಹಗರಣದಲ್ಲೂ ಇದೇ ತಂಡ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ.
ಅಪ್ಪ-ಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ. ದೆಹಲಿಯಲ್ಲಿ ಇರುವ ನಮ ಸಂಸದರು ಎಲ್ಲರೂ ವಿಜಯೇಂದ್ರ ವಿರುದ್ಧ ಇದ್ದಾರೆ. ಮೊದಲು ಅವರನ್ನು ಪಕ್ಷದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಉಚ್ಚಾಟನೆ ಮಾಡಿದರೆ, ಬಿಜೆಪಿಯಿಂದ ಹೊರ ಹೋಗಬಹುದು ಎಂದು ಈ ಕುತಂತ್ರ ಅನುಸರಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ, ವಿಜಯೇಂದ್ರ ಜತೆ ಇಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಈತರಹದ ಅನ್ಯಾಯ ನಡೆದುಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಚ್ಛಾಟನೆ ಮರುಪರಿಶೀಲನೆಗೆ ನಾನು ಮನವಿ ಮಾಡಲ್ಲ, ನಮ ತಂಡದವರು ಮನವಿ ಮಾಡಿದ್ದಾರೆ. ಒಬ್ಬ ಹಿಂದೂ ನಾಯಕನನ್ನು ಬಿಜೆಪಿ ಇಂದು ನಡೆಸಿಕೊಂಡ ರೀತಿಯನ್ನು ಇಡೀ ರಾಜ್ಯ ನೋಡುತ್ತಿದೆ. ಹಿಂದೂ ನಾಯಕನನ್ನು ಮುಗಿಸಬೇಕು ಎಂಬ ಕಾರ್ಯತಂತ್ರ ನಡೆಯುತ್ತಿದೆ. ನಾನು ದೆಹಲಿಗೆ ಹೋಗಲ್ಲ, ಅಲ್ಲಿ ನನಗೆ ಏನೂ ಕೆಲಸ ಇಲ್ಲ. ಉಚ್ಛಾಟನೆ ಮರುಪರಿಶೀಲನೆಗೆ ನಾನು ಮನವಿ ಮಾಡಿಕೊಳ್ಳುವುದಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ಅಲ್ಲದೇ ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡುತ್ತಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರೋದಿದೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್‌ವೈ ಕುಟುಂಬವನ್ನು ನಾನು ಹೊರಗೆ ಇಡುವವರೆಗೂ ಬಿಡುವುದಿಲ್ಲ ಎಂದು ಶಪಥ ಮಾಡಿದರು.
ಮೂರು ನನಗೆ ಲಕ್ಕಿ, 3ನೇ ಬಾರಿ ಉಚ್ಚಾಟನೆ ಮಾಡಿರುವುದು ಮುಂದೆ ಏನಾಗುತ್ತದೆಯೋ ಕಾದುನೋಡಿ, ಇದಕ್ಕೆ ಕಾರಣಕರ್ತರಾದವರು ನಾಶವಾಗಲಿದ್ದಾರೆ. ಯಾರ ಮನವರಿಕೆಯನ್ನು ನಾನು ಮಾಡುವುದಿಲ್ಲ. ಜನಮೆಚ್ಚಿದ ನಾಯಕ ಯಾರೂ ಇಲ್ಲ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸುವ ಯೋಗ್ಯತೆ ಇಲ್ಲ. ಆದರೆ ನಾನು ಬಾಡಿಗೆ ಜನ ತಂದಿಲ್ಲ. ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ. ಕಳೆದ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯನ್ನು ತನ್ನ ಚೇಲಾ ನಿಲ್ಲಿಸಿ ಯಡಿಯೂರಪ್ಪ ಸೋಲಿಸಿದ ಎಂದು ಯತ್ನಾಳ್ ಮಾರ್ಮಿಕವಾಗಿ ನುಡಿದಿದ್ದಾರೆ.
ನಾನು ಹಿಂದೂ ಪರವಾಗಿ ಹೋರಾಟ ಮಾಡುತ್ತೇನೆ. ಇಡೀ ರಾಜ್ಯ ಸುತ್ತುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡುತ್ತಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವವರು ಯಾರೂ ಇಲ್ಲ. ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತು ಪಡಿಸಿ ಎಲ್ಲಾ ಸಂಸದರೂ ನಮ ಪರ ಇದ್ದಾರೆ ಎಂದು ಹೇಳಿದ್ದಾರೆ. ನಾನು ಯಾವತ್ತೂ ಬಿಜೆಪಿಯನ್ನು ತೊರೆಯುವುದಿಲ್ಲ, ರಾಜ್ಯದಾದ್ಯಂತ ಸುತ್ತಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ, ಸನಾತನ ಹಿಂದೂ ಧರ್ಮದಿಂದ ಹಳಿ ತಪ್ಪಿರುವ ಪಕ್ಷವನ್ನು ಪುನಃ ಟ್ರ್ಯಾಕ್ ಮೇಲೆ ತರುವ ಕೆಲಸ ಮಾಡುತ್ತೇನೆಯೇ ಹೊರತು ಹೊಸ ಪಕ್ಷ ಕಟ್ಟುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಯತ್ನಾಳ್ ಹೇಳಿದರು.