ಬೆಂಗಳೂರು, ಅ.25– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾರದ ಕೊನೆ ದಿನಗಳಲ್ಲಿ ನಡೆಸುತ್ತಿರುವ ಬೆಂಗಳೂರು ಉದ್ಯಾನವನ ನಡಿಗೆ ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಗಾಂಧಿಪಾರ್ಕ್‌ನಲ್ಲಿ ನಡೆಯಿತು.ಸ್ಥಳೀಯ ನಾಗರಿಕರು ನಾನಾ ರೀತಿಯ ಸಮಸ್ಯೆಗಳನ್ನು ಉಪ ಮುಖ್ಯಮಂತ್ರಿಯವರ ಮುಂದೆ ತೋಡಿಕೊಂಡರು. ಶಾಸಕ ಎಸ್.ಟಿ. ಸೋಮಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶ್ವೇಶ್ವರಯ್ಯ ಲೇಔಟ್ 8ನೇ ಬ್ಲಾಕ್‌ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣ ಭೈರೇಗೌಡ ಮಾತನಾಡಿ, ತಮ ಬಡಾವಣೆಯಲ್ಲಿ ತ್ಯಾಜ್ಯ ಕಸವಿಲೇವಾರಿ ವಾಹನಗಳ ಕೊರತೆಯಿದೆ. ರಸ್ತೆಗಳು ಸುಸ್ಥಿತಿಯಲಿಲ್ಲ, ಖಾಲಿ ಜಾಗದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿರುತ್ತಾರೆ ಇದರಿಂದ ಸಮಸ್ಯೆಗಳಾಗುತ್ತಿದೆ ಎಂದು ವಿವರಿಸಿದರು.
ಅಣ್ಣದಾನಯ್ಯ ಎಂಬುವರು ಮಾತನಾಡಿ, ಗಾಂಧಿಪಾರ್ಕ್‌ನಲ್ಲಿ ಅಳವಡಿಸಿರುವ ಜಿಮ್ ಸಲಕರಣೆಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ಸರಿಪಡಿಸಬೇಕು. ವೃತ್ತಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಬೇಕು. ಶೌಚಾಲಯ ವ್ಯವಸ್ಥೆಯನ್ನು ಸರಿ ಪಡಿಸಿ ಎಂದು ಮನವಿ ಮಾಡಿದರು.
ಬ್ಯಾಡರಹಳ್ಳಿ ದೂರವಾಣಿ ಬಡಾವಣೆ ನಿವಾಸಿಗಳ ಪರವಾಗಿ ಮಾತನಾಡಿದ ವ್ಯಕ್ತಿಯೊಬ್ಬರು ಈ ಬಡಾವಣೆ ಮೊದಲು ಗ್ರಾಮಪಂಚಾಯ್ತಿ ವ್ಯಾಪ್ತಿಗೊಳಪಟ್ಟಿದ್ದು, ಬಿಬಿಎಂಪಿ ಸೇರಿದ ಹಿನ್ನೆಲೆ ವಿದ್ಯುತ್ ಸಂಪರ್ಕಕ್ಕಾಗಿ 18 ಲಕ್ಷ, 20 ಲಕ್ಷ ಹಣ ಕೇಳುತ್ತಿದ್ದಾರೆ, ಮೇಕ್ ಓವರ್ ಪ್ರಮಾಣಪತ್ರ ತನ್ನಿ ಎಂದು ಹೇಳುತ್ತಿದ್ದಾರೆ. ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ವಿ.ಎನ್.ನಾರಾಯಣ್‌ರೊಬ್ಬರು ಮಾತನಾಡಿ, ಕುವೆಂಪು ಪಾರ್ಕ್‌ನ್ನು ಅಭಿವೃದ್ಧಿ ಪಡಿಸಬೇಕು. ಮಹಿಳೆಯರಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಶ್ರೀನಿವಾಸಗೌಡರು ಮಾತನಾಡಿ, ಮಾಗಡಿ ರಸ್ತೆ ಚಿಕ್ಕದಾಗಿರುವುದರಿಂದ ಸಂಚಾರ ದಟ್ಟಣೆ ತೀವ್ರವಾಗಿದೆ. ಇದನ್ನು ಸರಿಪಡಿಸಿ ಎಂದರು.
ವಾಸುದೇವ ಎಂಬುವರು ರಾಜಕಾಲುವೆಯ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ ಅದನ್ನು ತಡೆಯಲು ಅಡ್ಡಗೋಡೆ ನಿರ್ಮಿಸಬೇಕು. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿ ಎಂದರು.
ಬ್ರಹಗಿರಿ ಬಡಾವಣೆಯ ಕುಮಾರಸ್ವಾಮಿ ಅವರು ಮಾತನಾಡಿ, ಬಿಡಿಎ ಸ್ವಾಧೀನ ಪತ್ರ ನೀಡಲು ಒಂದು ವರ್ಷ ತಡಮಾಡಿತ್ತು. ನೀರಿನ ಸಂಪರ್ಕ ಪಡೆಯಲು ಹೋದಾಗ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಉಪಕಾರ್ ಬಡಾವಣೆಯ ಡಾ. ರವಿಕುಮಾರ್ ಮಾತನಾಡಿ, ಕ್ಲಬ್‌ಹೌಸ್ ಜಾಗವನ್ನು ಬಿಡಿಎಯಿಂದ ಕ್ಷೇಮಾಭಿವೃದ್ಧಿ ಸಂಘಕ್ಕೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದರು.ಕೆಂಪೇಗೌಡ ನಗರದ ಪ್ರಕಾಶ್ ಎಂಬುವರು ತಮ ಬಡಾವಣೆಯಲ್ಲಿ ಸುಸರ್ಜಿತ ಗ್ರಂಥಾಲಯ ನಿರ್ಮಿಸುವಂತೆ ಒತ್ತಾಯಿಸಿದರು.
ದೊಡ್ಡ ಬಿದರುಕಲ್ಲಿನ ಚಂದ್ರಶೇಖರ್ ಅವರು ಮಾತನಾಡಿ, ಕಸದ ವಿಲೇವಾರಿ ಘಟಕ ತಮ ಪ್ರದೇಶದಲ್ಲಿದ್ದು, ಬದುಕಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.ನಂಜುಂಡಯ್ಯ ಎಂಬುವರು ಮಾತನಾಡಿ, 1971ರಲ್ಲಿ 30, 40 ನಿವೇಶನವನ್ನು 7 ಸಾವಿರ ರೂ.ಗಳಿಗೆ ಖರೀದಿಸಿದ್ದೆವು. ಈಗ ಅದರ ಮೌಲ್ಯ 48 ಲಕ್ಷ ರೂ.ಗಳಿಷ್ಟಿದೆ. ಎ ಖಾತೆಯನ್ನಾಗಿ ಪರಿವರ್ತಿಸಲು ಶೇ. 2 ರಷ್ಟು ಶುಲ್ಕ ಪಾವತಿಸಬೇಕಾದರೆ, ಸುಮಾರು 5 ಲಕ್ಷ ರೂ. ಆಗುತ್ತಿದೆ. ಇದನ್ನು ಕಡಿಮೆ ಮಾಡಿಕೊಡಿ ಎಂದು ಮನವಿ ಮಾಡಿ, ಇದರ ಜೊತೆಗೆ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ಅಥವಾ ಯಾವುದಾದರೂ ಉಚಿತ ಸೌಲಭ್ಯವನ್ನು ಕಲ್ಪಿಸಿಕೊಡಿ. ನೀವೇ ಕಟ್ಟಿರುವ ಹುತ್ತದಲ್ಲಿ ನೀವೇ ಆಡಳಿತ ಮಾಡಬೇಕೆಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿಯಾಗಿ ಎಂದು ಮನವಿ ಮಾಡಿದರು.
ಈ ವೇಳೆ ಕೆಲವರು ಜೈಕಾರ ಹಾಕಿದಾಗ, ಘೋಷಣೆ ಕೂಗುವವರು ಆ ಕಡೆ ಹೋಗಿ ಎಂದು ಡಿ.ಕೆ.ಶಿವಕುಮಾರ್ ಗದರಿದರು. ಕೊಡಿಗೇಹಳ್ಳಿ ಪ್ರದೇಶದ ಪ್ರದೀಪ್ ಎಂಬುವರು ಕಾವೇರಿ ನೀರಿನ ಸಂಪರ್ಕವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.ರಾಮಚಂದ್ರ ಎಂಬ ತಿರುಮಲಾಪುರ ನಿವಾಸಿ ತಮ ಊರನ್ನು ಜಿಬಿಎಗೆ ಸೇರಿಸಿ ಎಂದು ಮನವಿ ಮಾಡಿದರು.ಬಹಳಷ್ಟು ನಾಗರಿಕರು ಶಾಸಕ ಎಸ್.ಟಿ. ಸೋಮಶೇಖರ್ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಸಣ್ಣಪುಟ್ಟ ಕೊರತೆಗಳಿವೆ. ಅವುಗಳನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ಮಾದವನಗರದ ಪುಷ್ಪರಾಜ್ ಎಂಬುವರು ನಮಗೆ ಒಳ ಚರಂಡಿ ವ್ಯವಸ್ಥೆಯಿಲ್ಲ. ತಮ ಗ್ರಾಮದ ಪೈಪ್ಲೈನ್‌ಮೇಲೆ ಬೃಹತ್ ಗಾತ್ರದ ವಾಹನಗಳು ಸಂಚರಿಸುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹೇರೋಹಳ್ಳಿ ಗ್ರಾಮದ ಮಂಜೇಶ್ ಎಂಬುವರು ತಮ ಗ್ರಾಮದಲ್ಲಿ ರಸ್ತೆಗಳು ಕಿರಿದಾಗಿವೆ. ಸಾಕಷ್ಟು ಸಂಚಾರ ದಟ್ಟಣೆ ಇದೆ. ಅಪಘಾತಗಳು ಹೆಚ್ಚಾಗುತ್ತಿವೆ. ಸರ್ಕಾರಿ ಭೂಮಿಗಳ ಒತ್ತುವರಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕು. ರೌಡಿ ಹಾವಳಿಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ಸಿ.ಎಂ. ಚಂದ್ರಕುಮಾರ್ ಎಂಬುವರು 8ನೇ ಮೈಲಿನಿಂದ ಮಾಗಡಿ ರಸ್ತೆವರೆಗೂ ಮುಖ್ಯರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.ಹೇರೋಹಳ್ಳಿ ವಾರ್ಡ್‌ನ ಆರ್‌ಓ, ಎಆರ್‌ಓ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅವರನ್ನು ಬದಲಾವಣೆ ಮಾಡಿಕೊಡಿ ಎಂದು ಹೇಳಿದರು.
ಮಂಗಳ ಎಂಬುವರು ಮಾತನಾಡಿ, ಚಿಕ್ಕ ನಿವೇಶನ ಖರೀದಿಸಿದ್ದೇನೆ ಈ ಮೊದಲು ನಾಲ್ಕು ಜನ ನಿವೇಶನ ಖರೀದಿಸಿದ್ದಾರೆ, ನಾನು ಐದನೇಯವಳಾಗಿ ನಿವೇಶನ ತೆಗೆದುಕೊಂಡಿದ್ದೇನೆ. ಇರುವ ಮನೆ ಒಡೆದು ಹೊಸ ಮನೆ ಕಟ್ಟಲು ಹೋದಾಗ ಕೆಲವರು ಬಂದು ಬೆದರಿಕೆ ಹಾಕಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ದೀಪಾ ಎಂಬ ಯುವತಿ ಭಾರತನಗರ 2ನೇ ಹಂತದಲ್ಲಿ ಸಾರ್ವಜನಿಕ ಸಾರಿಗೆ ತೊಂದರೆಯಿದೆ. ಮೆಟ್ರೋ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿ, ಎಲೆಕ್ಟ್ರಾನಿಕ್‌ಸಿಟಿ ಕಡೆಗಳಲ್ಲಿ ಟೆಕ್‌ಪಾರ್ಕ್ ಇದೆ ಎಂಬ ಕಾರಣಕ್ಕೆ ಹೆಚ್ಚುವರಿ ಬಸ್ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ಜನವಸತಿ ಇರುವ ಈ ಭಾಗದಲ್ಲಿ ಸೌಲಭ್ಯಗಳ ಕೊರತೆಯಿದೆ. ಒಂದೇ ರಸ್ತೆಯನ್ನು ಎಷ್ಟು ಬಾರಿ ಕಿತ್ತುಹಾಕಿ ಮರು ನಿರ್ಮಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ರಮೇಶ್‌ಗೌಡ ಎಂಬುವರು ಮಲ್ಲತಹಳ್ಳಿ ಕೆರೆಯಲ್ಲಿ ಸ್ಥಳೀಯ ಶಾಸಕರ ಚೇಲಗಳು ಶೆಡ್‌ಗಳನ್ನು ಹಾಕಿಕೊಂಡಿದ್ದಾರೆ. ಅವರನ್ನು ತೆರವುಮಾಡಿ ಎಂದರು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗೌಡ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದಾಗ ನಾಡಪ್ರಭು ಹೆಸರೇ ಇದೆ. ಸಮುದಾಯ ಭವನ ಏಕೆ? ಜಾತಿಗಾಗಿ ಭವನ ಬೇಡ, ಎಲ್ಲರಿಗೂ ಸೇರಿ ಸಮುದಾಯ ಭವನ ನಿರ್ಮಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ಮಲ್ಲತಹಳ್ಳಿಯಲ್ಲಿನ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡುವಂತೆ ಸೂಚಿಸಿದರು.
