ಬೆಂಗಳೂರು, ಅ.2- ನಾಯಕ ರಾಗಲು ತಮ್ಮ ವೈಯಕ್ತಿಕ ಲಾಭಗಳಿಗೆ ಎಲ್ಲಿ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಅವರನ್ನು ನಂಬಿದ್ದ ಕಾರ್ಯಕರ್ತರು, ಮುಖಂಡರ ಗತಿ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಹಾಗೂ ಮತ್ತಿತರರು ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
5 ವರ್ಷದಲ್ಲಿ ರಾಜ್ಯದ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ದಂಡನಾಯಕರು ಈ ರೀತಿ ಹೇಳಿದರೆ ಪಕ್ಷ, ಅದರ ಮುಖಂಡರು, ಕಾರ್ಯಕರ್ತರ ಗತಿ ಏನಾಗಬೇಕು, ಯಾರನ್ನು ನಂಬಿಕೊಂಡು ರಾಜಕಾರಣ ಮಾಡಬೇಕು ಎಂದು ಪ್ರಶ್ನಿಸಿದರು.
ತಮ್ಮ ಅನುಕೂಲಕ್ಕಾಗಿ ಒಂದೇ ದಿನದಲ್ಲಿ ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳಬಹುದು. ಸಿದ್ಧಾಂತ ನಂಬಿಕೊಂಡು ರಾಜಕಾರಣ ಮಾಡುವವರು ಏನಾಗಬೇಕು, ಕಾಂಗ್ರೆಸ್ ಪಕ್ಷದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಎಂ.ಇಬ್ರಾಹಿಂ ರಾಜಿನಾಮೆ ಕೊಟ್ಟು ಜೆಡಿಎಸ್ ಸೇರಿದ್ದರು. ನೀವು ಈ ಮೊದಲು ಅವರಿಗೆ ಕೊಟ್ಟ ಮಾತು ಏನಾಯಿತು. ಮೈತ್ರಿ ವಿಷಯ ಇಬ್ರಾಹಿಂಗೆ ಮಾಹಿತಿ ಇಲ್ಲವಂತೆ ಎಂದು ಲೇವಡಿ ಮಾಡಿದರು.
ಇಬ್ರಾಹಿಂ ಸೇರ್ಪಡೆಯಾಗುವಾಗ ಮಿಸ್ಟರ್ ಶಿವಕುಮಾರ್ ಎಂದು ನನ್ನನ್ನು ಹಂಗಿಸಿದರು. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ನಮ್ಮ ಪಕ್ಷದ ನಾಯಕನನ್ನು ಸೇರ್ಪಡೆ ಮಾಡಿಸಿಕೊಂಡಿದ್ದು ರಾಜಕೀಯ ಚದುರಂಗದಾಟವಲ್ಲವೆ, ಹಾವು- ಏಣಿ ಆಟ ಅಲ್ಲವೇ, ಫುಟ್ಬಾಲ್ ಆಟ ಅಲ್ಲವೇ, ಈಗ ಜೆಡಿಎಸ್ ನಲ್ಲಿರುವವರು ಸಾಗರೋಪಾದಿ ಯಲ್ಲಿ ಕಾಂಗ್ರೆಸ್‍ನತ್ತ ಬರುತ್ತಿದ್ದಾರೆ. ನಾವು ಯಾರನ್ನೂ ಕರೆಯಬೇಕಿಲ್ಲ. ಬರುವವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬೀದರ್‍ನಿಂದ ಚಾಮರಾಜನಗರದವರೆಗೂ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತದ ಮೇಲೆ ನಿಂತಿದೆಯೇ ಹೊರತು ವ್ಯಕ್ತಿಯ ಮೇಲೆ ನಿಂತಿಲ್ಲ. ನಾನಿಲ್ಲದೇ ಹೋದರೂ ಪಕ್ಷ ನಿಮ್ಮನ್ನು ರಕ್ಷಣೆ ಮಾಡಲಿದೆ ಎಂದು ತಿಳಿಸಿದರು.
ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದಂತೆ 43 ಮಂದಿ ಬಂಧನ : ಸಿಎಂ
ಮುಂದಿನ ದಿನಗಳಲ್ಲಿ ಚನ್ನಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಇನ್ನಷ್ಟು ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಿಸ್ಟರ್ ಶಿವಕುಮಾರ್ ನಿಮ್ಮ ಆಟ ನಡೆಯುವುದಿಲ್ಲ ಎಂದು ನನಗೆ ಎಚ್ಚರಿಕೆ ನೀಡಿದ್ದಾರೆ. ಹಿರಿಯರ ಮಾತುಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಆದರೆ ದೇವೇಗೌಡರ ಪುತ್ರರು ಜನತಾದಳವನ್ನು ವಿಸರ್ಜನೆ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಾದರೆ ಕಾರ್ಯಕರ್ತರು ಎಲ್ಲಿ ಹೋಗಬೇಕು, ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಈ ಮೊದಲು ಹೇಳಿದ್ದವರು ಈಗ ಮಾಡಿದ್ದೇನು, ರಾಜ್ಯದ ಜನರಿಗೆ ನಿಮ್ಮಿಂದ ಯಾವ ಸಂದೇಶ ರವಾನೆಯಾಗಿದೆ ಎಂದು ಪ್ರಶ್ನಿಸಿದರು.
ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನು ನಮ್ರತೆಯಿಂದ ಮಾಡುತ್ತೇನೆ. ಕುಮಾರಸ್ವಾಮಿಯವರನ್ನು ಬೆಳೆಸಿದ ಜನರೇ ಇಂದು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಎಷ್ಟೇ ಬೆದರಿಸಿ, ಹೆದರಿಸಿದರೂ, ಬುಲೆಟ್‍ನ ಮಾತುಗಳನ್ನಾಡಿದರು. ಅದನ್ನು ಮೀರಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ನಾಯಕರು ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ, ಜೆಡಿಎಸ್ ಪಕ್ಷಗಳ ಸಿದ್ಧಾಂತಗಳೇ ಬೇರೆ. ಅದನ್ನು ಮರೆತು ಮೈತ್ರಿ ಮಾಡಿಕೊಂಡಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಎರಡು ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಯಲಿವೆ ಎಂದು ಎಚ್ಚರಿಸಿದರು.
ಸಚಿವ ಜಮೀರ್ ಅಹಮ್ಮದ್ ಖಾನ್, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರು 60-70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿಲ್ಲ. ಕೇವಲ 12 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರ ಗೆಲುವಿಗೆ ಮುಸಲ್ಮಾನರ ಮತಗಳೇ ಕಾರಣ. ಈಗ ಮುಸಲ್ಮಾನರು ನನಗೆ ಅನಿವಾರ್ಯವಾಗಿ ಮತ ನೀಡಿದ್ದಾರೆ ಎಂಬ ಹೇಳಿಕೆಗಳು ತೀವ್ರ ನೋವುಂಟು ಮಾಡಿವೆ ಎಂದರು.
ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯಾದ್ಯಂತ 50 ರಿಂದ 70 ಜನ ಪಾಲಿಕೆ ಸದಸ್ಯರು, ಮಾಜಿ ಶಾಸಕರು, ಪ್ರಮುಖ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ದೇವೇಗೌಡರು ಜಾತ್ಯತೀತರು ಎಂದು ಈಗಲೂ ನಾನು ನಂಬುತ್ತೇನೆ. ಆದರೆ ಕುಮಾರಸ್ವಾಮಿ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ರಾಜಕಾರಣ ಮಾಡಿದವರು. ಈಗ ತಮ್ಮ ಅಸಲಿ ಬಣ್ಣ ಬಯಲು ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಶ್ವತ್ಥ ನಾರಾಯಣ ಮಾತನಾಡಿ, ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಬೇಸರವಾಗಿ ಹಾಗೂ ಸಂಸದ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದರು.
ಅಲ್ಪಸಂಖ್ಯಾತ ಮುಖಂಡ ಜಬಿವುಲ್ಲಾಖಾನ್ ಅವರು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರನ್ನು ಸೋಲಿಸಬೇಕೆಂದು ಕಾಂಗ್ರೆಸ್‍ನವರ ಕೈ, ಕಾಲನ್ನು ಹಿಡಿದು ಕುಮಾರಸ್ವಾಮಿಯವರಿಗೆ ಮತ ಹಾಕಿಸಿದ್ದೆವು. ಈಗ ಅಲ್ಪಸಂಖ್ಯಾತರ ಕುರಿತು ಹಗುರವಾಗಿ ಮಾತನಾಡುತ್ತಿರುವುದನ್ನು ಕೇಳಿದರೆ ಮನಸ್ಸಿಗೆ ನೋವಾಗುತ್ತಿದೆ ಎಂದು ಹೇಳಿದರು.