Saturday, October 4, 2025
Homeರಾಜ್ಯಬಿ.ಆರ್.ಪಾಟೀಲ್ ವಿರುದ್ಧ ಡಿಕೆಶಿ ಗರಂ

ಬಿ.ಆರ್.ಪಾಟೀಲ್ ವಿರುದ್ಧ ಡಿಕೆಶಿ ಗರಂ

DK Shivakumar condemns B.R. Patil's statement

ಬೆಂಗಳೂರು, ಜೂ.21- ಅಡಳಿತ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಅವರ ಹೇಳಿಕೆಯನ್ನು ತಾವು ಖಂಡಿಸುತ್ತಿದ್ದು, ಮುಖ್ಯಮಂತ್ರಿ ಹಾಗೂ ತಾವು ಅವರಿಗೆ ಈ ವಿಚಾರವಾಗಿ ಸೂಕ್ತ ತಿಳುವಳಿಕೆ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ಮಾಡಿರುವ ಬಿ.ಆರ್.ಪಾಟೀಲ್ ಇಂದು ಮತ್ತೆ ಅದನ್ನು ಪುನರುಚ್ಚರಿಸಿರುವುದನ್ನು ಒಪ್ಪುವುದಿಲ್ಲ. ಅವರು ಏನು ಮಾತನಾಡಿದ್ದಾರೆ ಎಂದು ನನಗೆ ಇನ್ನೂ ಅರ್ಥವಾಗಿಲ್ಲ ಎಂದಿದ್ದಾರೆ.

ಈ ಹೇಳಿಕೆ ಮತ್ತು ನಡವಳಿಕೆ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದರು.ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿದೆ. ಗ್ರಾ.ಪಂ. ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡುತ್ತದೆ. 1.50 ಲಕ್ಷ ರೂ. ಅನುದಾನ ನೀಡುವುದಕ್ಕೆ ಯಾವ ಮಂತ್ರಿ ಲಂಚ ಕೇಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಬಿ.ಆರ್.ಪಾಟೀಲ್ ಯಾವ ಹಂತದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಆ ರೀತಿ ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಮುಖ್ಯಮಂತ್ರಿ ಹಾಗೂ ತಾವು ಬಿ.ಆರ್.ಪಾಟೀಲರಿಗೆ ಸ್ಪಷ್ಟವಾಗಿ ಈ ಬಗ್ಗೆ ಏನು ಹೇಳಬೇಕೋ ಅದನ್ನು ಹೇಳುತ್ತೇವೆ ಎಂದಿದ್ದಾರೆ.

ಸಂಪುಟದಲ್ಲಿರುವ ಹಲವು ಸಚಿವರು ಬಿ.ಆರ್.ಪಾಟೀಲ್ ಹೇಳಿಕೆ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಬಿ.ಆರ್.ಪಾಟೀಲ್ ಪದೇಪದೇ ಈ ರೀತಿಯ ಹೇಳಿಕೆಗಳ ಮೂಲಕ ಗೊಂದಲ ಮೂಡಿಸುತ್ತಿರುವುದಕ್ಕೆ ಕೆಲ ಸಚಿವರು ಬಹಿರಂಗ ಅಸಮಾಧಾನವನ್ನು ಹೊರಹಾಕಿದ್ದಾರೆ. ನಿನ್ನೆ ಆಡಿಯೋ ಬಹಿರಂಗವಾದ ಸಂದರ್ಭದಲ್ಲಿಡಿ.ಕೆ.ಶಿವಕುಮಾರ್ ಏಕಾಏಕಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ನುಣುಚಿಕೊಂಡಿದ್ದರು. ಇಂದು ಬಿ.ಆರ್.ಪಾಟೀಲ್ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದು, ನಾನು ಹೇಳಿರುವುದು ಸತ್ಯ ಎಂದಿದ್ದಕ್ಕೆ ಡಿ.ಕೆ.ಶಿವಕುಮಾರ್ ಖಾರವಾಗಿ ತಿರುಗೇಟು ನೀಡಿದ್ದಾರೆ.

2027ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ಹರಿಸಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ. ಈ ಯೋಜನೆಗೆ ಅರಣ್ಯ ಇಲಾಖೆಗೆ ಸಂಬಂಧಿತ ಸಮಸ್ಯೆಗಳು, ಭೂ ಸ್ವಾಧೀನ ಪ್ರಕ್ರಿಯೆ, ಬೈರಗೊಂಡಲು, ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಹಾಗೂ ಆರ್ಥಿಕ ವಿಚಾರವಾಗಿ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಹೀಗಾಗಿ ಈ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಮಾರ್ಪಾಟು ಮಾಡಿರುವ ಅಂಶಗಳು, ಸಚಿವರುಗಳ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿ ಕೆಲವು ತಾಂತ್ರಿಕ ಅಂಶಗಳು ಕೂಡ ಇವೆ. ಎಲ್ಲವನ್ನು ಅಧ್ಯಯನ ಮಾಡಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆಯಿಲ್ಲ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ಮೇಕೆದಾಟು ಪಾದಯಾತ್ರೆ ವಿಚಾರವಾಗಿ ನಮಗೆ ಆಹ್ವಾನ ನೀಡಿಲ್ಲ. ಹೀಗಾಗಿ ನಟ್ಟು ಬೋಲ್ಡ್ ಟೈಟ್ ಮಾಡುತ್ತೇವೆ ಎಂದು ಹೇಳಿರುವುದು ಸರಿಯಲ್ಲ ಎಂಬ ನಟ ಸುದೀಪ್ ಹೇಳಿಕೆ ಬಗ್ಗೆ ಕೇಳಿದಾಗ, ಈಗ ನಾನು ಈ ವಿಚಾರವಾಗಿ ಉತ್ತರ ನೀಡುವುದಿಲ್ಲ. ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ಆಹ್ವಾನ ನೀಡಿದ್ದೇನೆ. ಮಾಧ್ಯಮಗಳ ದಾಖಲೆಗಳಲ್ಲಿ ಎಲ್ಲವೂ ಇದೆ. ಕಾಲವೇ ಉತ್ತರ ನೀಡಲಿದೆ ಎಂದರು.

RELATED ARTICLES

Latest News