ಬೆಂಗಳೂರು,ಮಾ.2- ಬಡವರ ಮನೆ ನಿರ್ಮಾಣಕ್ಕೆ ರೂಪಿಸಲಾಗಿರುವ ವಸತಿ ಯೋಜನೆಗಳಿಂದ ಸಂಗ್ರಹಿಸುತ್ತಿರುವ ಜಿಎಸ್‍ಟಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಸರ್ವರಿಗೂ ಸೂರು ಯೋಜನೆಯಡಿ ಕೆ.ಆರ್.ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ 33,789 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಮನೆ ನಿರ್ಮಾಣಕ್ಕೆ ಒಂದೂವರೆ ಲಕ್ಷ ರೂ.ಗಳ ಅನುದಾನ ನೀಡುವ ಕೇಂದ್ರಸರ್ಕಾರ ಜಿಎಸ್‍ಟಿ ರೂಪದಲ್ಲಿ 1.26 ಲಕ್ಷ ರೂ.ಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿದ್ದ ಬಿಜೆಪಿಯ ಶಾಸಕ ಭೈರತಿ ಬಸವರಾಜು ಅವರತ್ತ ತಿರುಗಿದ ಡಿ.ಕೆ.ಶಿವಕುಮಾರ್, ಈ ರೀತಿಯ ಅವೈಜ್ಞಾನಿಕ ಜಿಎಸ್‍ಟಿಯನ್ನು ಅದರಲ್ಲೂ ಬಡವರ ಯೋಜನೆಯಲ್ಲಿನ ಹಣವನ್ನು ಕಸಿದುಕೊಳ್ಳುವ ತೆರಿಗೆ ಪದ್ಧತಿಯನ್ನು ಕಡಿತ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಎಂದು ಸಲಹೆ ನೀಡಿದರು. ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರುತ್ತಿದೆ. ಎಲ್ಲಾ ಸೌಲಭ್ಯ ಗಳೂ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಜನ ಜೈಕಾರಗಳ ಮೂಲಕ ಸ್ಪಂದಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದರು. ಈಗ ಅವರೇ ನಮ್ಮ ಗ್ಯಾರಂಟಿಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದು ಬಿಜೆಪಿ ಗ್ಯಾರಂಟಿಯಲ್ಲ, ಮೋದಿ ಗ್ಯಾರಂಟಿ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಈ ವೇಳೆ ವೇದಿಕೆಯಲ್ಲಿ ಒಬ್ಬರು ಡೂಪ್ಲಿಕೇಟ್ ಗ್ಯಾರಂಟಿ ಎಂದು ಹೇಳಿದಾಗ, ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಫಲಾನುಭವಿಗಳ ಸಮಾವೇಶದಲ್ಲಿ ರಾಜ್ಯಸರ್ಕಾರದ ಗ್ಯಾರಂಟಿಗಳು ಜನರ ಬದುಕನ್ನು ಸುಧಾರಣೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಜ್ಞಾನಿ ಅರಗ ಜ್ಞಾನೇಂದ್ರ ಇದನ್ನು ಡೂಪ್ಲಿಕೇಟ್ ಗ್ಯಾರಂಟಿ ಎಂದು ಟೀಕಿಸಿರುವುದನ್ನೂ ಗಮನಿಸಿದ್ದೇನೆ ಎಂದರು.
ಟೀಕೆ ಮಾಡುವ ಬಿಜೆಪಿಯವರು ತಮ್ಮ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಗೃಹಲಕ್ಷ್ಮಿಯ 2 ಸಾವಿರ ರೂ.ಗಳನ್ನು ತೆಗೆದುಕೊಳ್ಳಬೇಡಿ, ಶಕ್ತಿ ಯೋಜನೆಯ ಸೌಲಭ್ಯ ಪಡೆಯದೆ ದುಡ್ಡು ಕೊಟ್ಟು ಬಸ್‍ನಲ್ಲಿ ಓಡಾಡಲು ಹೇಳಿ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಟೀಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ನಮ್ಮದೇ ಯೋಜನೆಗಳನ್ನು ಕದ್ದು ಪ್ರಚಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.