ಬೆಂಗಳೂರು,ಜ.29- ಅನ್ಯಪಕ್ಷಗಳಲ್ಲಿರುವ ಪ್ರಭಾವಿ ನಾಯಕರನ್ನು ಕಾಂಗ್ರೆಸ್ಗೆ ಸೆಳೆಯುವ ತಂತ್ರಗಾರಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದು ವರೆಸಿದ್ದು, ಹಲವು ನಾಯಕರಿಗೆ ಗಾಳ ಹಾಕಿದ್ದಾರೆ.
ಬಿಜೆಪಿಯಲ್ಲಿರುವ ಶ್ರೀರಾಮಲುರವರನ್ನು ಸೆಳೆಯುವ ತೆರೆಮರೆಯ ಯತ್ನ ಮುಂದುವರೆದಿದ್ದು, ಅದೇ ಸಂದರ್ಭದಲ್ಲಿ ತುರುವೇಕೆರೆಯ ಮಾಜಿ ಶಾಸಕ ಮಸಾಲೆ ಜಯರಾಂ ಅವರನ್ನು ಕಾಂಗ್ರೆಸ್ಗೆ ಡಿ.ಕೆ.ಶಿವಕುಮಾರ್ ಆಹ್ವಾನಿಸಿದ್ದಾರೆ.
ನಿನ್ನೆ ತಮ ಪುತ್ರನ ಮದುವೆ ಆಮಂತ್ರಣ ನೀಡಲು ಮಸಾಲೆ ಜಯರಾಂ ಅವರು ಡಿ.ಕೆ.ಶಿವಕುಮಾರ್ರವರ ಮನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ರವರು ಹಲವು ನಾಯಕರ ಜೊತೆ ಚರ್ಚೆ ನಡೆಸಿದ್ದು ಪಕ್ಷ ಸೇರ್ಪಡೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಮಸಾಲೆ ಜಯರಾಂ ಅವರನ್ನು ಬೆಮೆಲ್ ಕಾಂತರಾಜು ಅವರು ಡಿ.ಕೆ.ಶಿವಕುಮಾರ್ರವರ ಮನೆಗೆ ಕರೆತಂದಿದ್ದರು. ಕಾಂತರಾಜು ಕಾಂಗ್ರೆಸ್ನಿಂದ, ಮಸಾಲೆ ಜಯರಾಂ ಬಿಜೆಪಿಯಿಂದ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಡಿ.ಕೆ.ಶಿವಕುಮಾರ್ರವರ ಸೂಚನೆಯೊಂದಿಗೆ ಕಾಂತರಾಜು ಅವರು ಬೇರೆ ಕ್ಷೇತ್ರಗಳತ್ತ ಗಮನ ಹರಿಸಿದ್ದು, ಮಸಾಲೆ ಜಯರಾಂ ಕಾಂಗ್ರೆಸ್ಗೆ ಬಂದರೆ ತುರುವೇಕೆರೆಯನ್ನು ಬಿಟ್ಟುಕೊಡುವಂತೆ ಚರ್ಚೆಯಾಗಿದೆ ಎನ್ನಲಾಗಿದೆ.
ಬೆಮೆಲ್ ಕಾಂತರಾಜು ಅವರಿಗೆ ದೊಡ್ಡಬಳ್ಳಾಪುರ ಕ್ಷೇತ್ರದತ್ತ ಗಮನ ಹರಿಸಲು ಸೂಚನೆ ನೀಡಲಾಗಿದೆ. ದಾಸರಹಳ್ಳಿ ಅಥವಾ ತುಮಕೂರು ಗ್ರಾಮಾಂತರ ಕ್ಷೇತ್ರದ ಮೇಲೂ ಕಾಂತರಾಜು ಕಣ್ಣಿಟ್ಟಿದ್ದು ಆ ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ಬೆಂಬಲಿಗರು ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ತುಮಕುರು ಜಿಲ್ಲಾ ರಾಜಕಾರಣದಲ್ಲಿ ಸಹಕಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ, ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯನವರ ಬಣದಲ್ಲಿ ಕಾಣಿಸಿಕೊಂಡಿದ್ದಾರೆ.ಡಿ.ಕೆ.ಶಿವಕುಮಾರ್ರವರ ಪರವಾಗಿ ತುಮಕೂರು ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ಇಲ್ಲವಾಗಿದೆ. ಹೀಗಾಗಿ ಮಸಾಲೆ ಜಯರಾಂ ಅವರಿಗೆ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರೆ.ಒಂದು ವೇಳೆ ಅವರು ಕಾಂಗ್ರೆಸ್ಗೆ ಆಗಮಿಸಿದರೆ ಡಿ.ಕೆ.ಶಿವಕುಮಾರ್ ಅವರ ಬಲ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರಗಳಿವೆ.