ಬೆಂಗಳೂರು,ಜ.6- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ವಾರಗಳ ವಿದೇಶಿ ಪ್ರವಾಸದ ಬಳಿಕ ಭಾರತಕ್ಕೆ ಮರಳಿದ್ದು, ನೇರವಾಗಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ರಾಜ್ಯ ರಾಜಕಾರಣದಲ್ಲಿ ಕಳೆದ ಒಂದು ವಾರದಿಂದ ತೆರೆಮರೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ನಡೆದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಹಿಂದುಳಿದ ವರ್ಗಗಳ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿದ್ದರು.
ಅದರ ಬೆನ್ನಲ್ಲೇ ಒಕ್ಕಲಿಗ ಸಮುದಾಯದ ಶಾಸಕರು, ಸಚಿವರು ಕೂಡ ಸಭೆ ನಡೆಸಿ ಎಸ್.ಎಂ.ಕೃಷ್ಣ ಅವರ ಪುಣ್ಯಸರಣೆ ಕಾರ್ಯಕ್ರಮ ಪೂರ್ವ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದ್ದರು. ಮತ್ತೊಂದೆಡೆ ಲಿಂಗಾಯತ ಸಮುದಾಯದ ಸಚಿವರು, ಶಾಸಕರು ಕೂಡ ಸಭೆ ನಡೆಸುವ ತಯಾರಿಯಲ್ಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಕುರಿತು ಚರ್ಚೆ ನಡೆದಿತ್ತು. ರಾಜ್ಯ ರಾಜಕಾರಣದಲ್ಲಿ ಆಯೋಗದ ವರದಿ ಸರ್ಕಾರಕ್ಕೆ ಬಿಸಿತುಪ್ಪವಾಗಿದೆ.
ಈ ಮೊದಲು ಕಾಂತರಾಜು ಅವರ ನೇತೃತ್ವದ ಆಯೋಗ ಸಂಗ್ರಹಿಸಿರುವ ದತ್ತಾಂಶಗಳು ವೈಜ್ಞಾನಿಕವಾಗಿಲ್ಲ ಎಂಬ ಕಾರಣಕ್ಕೆ ಅದರ ಜಾರಿಗೆ ಬಹಳಷ್ಟು ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇದರ ಹೊರತಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗ ಕೈ ಹಿಡಿದಿದೆ. ಕಳೆದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವೇ ಇದಕ್ಕೆ ಉದಾಹರಣೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯ ಜೊತೆ ಹಿಂದುಳಿದ ವರ್ಗಗಳ ವರದಿಯನ್ನು ಅನುಷ್ಠಾನಕ್ಕೆ ತರಲೇಬೇಕು ಎಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿತ್ತು.
ಅದರ ಜೊತೆಗೆ ಪ್ರಮುಖವಾಗಿ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ನಿಯಮವನ್ನು ಕಾಂಗ್ರೆಸ್‌ನಲ್ಲಿ ಜಾರಿಗೊಳಿಸುವ ಬಗ್ಗೆಯೂ ಚರ್ಚೆಗಳಾಗಿದ್ದವು.ಸಭೆ ನಡೆಸಿದವರ ಗುರಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಆಗಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಎರಡನ್ನೂ ಡಿ.ಕೆ.ಶಿವಕುಮಾರ್ ಕಳೆದ ಒಂದುಮುಕ್ಕಾಲು ವರ್ಷದಿಂದಲೂ ನಿಭಾಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿಗೆ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ವ್ಯಾಪ್ತಿಗಳ ಬಗ್ಗೆ ಅಸಹನೆ ಇದೆ. ಡಿ.ಕೆ.ಶಿವಕುಮಾರ್ ಅವರಿಗೆ ಕಡಿವಾಣ ಹಾಕಬೇಕು ಎಂಬ ಕಾರಣಕ್ಕಾಗಿಯೇ ಜಾತಿವಾರು ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಗೆ ಒತ್ತಡ ಹೇರಲಾರಂಭಿಸಿದರು.
ಇದರಿಂದ ಲೋಕಸಭೆ ಹಾಗೂ ಉಪಚುನಾವಣೆ ಪೂರ್ವದಲ್ಲಿ ಸಾಕಷ್ಟು ಗೊಂದಲಗಳಾಗಿದ್ದವು. ಕೊನೆಗೆ ಹೈಕಮಾಂಡ್ ಖುದ್ದು ಮಧ್ಯಪ್ರವೇಶ ಮಾಡಿ ವಿವಾದಿತ ಚರ್ಚೆಗಳಿಗೆ ಕಡಿವಾಣ ಹಾಕಿತ್ತು.
ಈಗ ಎಲ್ಲಾ ಚುನಾವಣೆಗಳೂ ಮುಗಿದಿದ್ದು ರಾಜಕೀಯ ವಿಚಾರಗಳ ಚರ್ಚೆಗೆ ಸಮಯ ಕೂಡ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಒಬ್ಬರ ನಂತರ ಒಬ್ಬರಂತೆ ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಎರಡೂವರೆ ವರ್ಷಗಳ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಗುಪ್ತ ಚರ್ಚೆಗಳು ಚಾಲ್ತಿಯಲ್ಲಿದ್ದರೆ ಇದಕ್ಕೆ ಏಟಿಗೆ ಎದುರೇಟು ಎಂಬಂತೆ ಡಿ.ಕೆ.ಶಿವಕುಮಾರ್ ಅವರ ಅಧಿಕಾರವನ್ನು ಮೊಟಕುಗೊಳಿಸಲು ಮತ್ತೊಂದು ಬಣ ಯತ್ನಿಸುತ್ತಿದೆ.