ಕಲಬುರಗಿ, ಮಾ.13- ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಮೌನದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಮತ ಸೂಚಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಎಂದು ಜಾರಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ತನ್ನ ಭಾವನೆಯನ್ನು ಅನಂತಕುಮಾರ್ ಹೆಗಡೆಯವರ ಮೂಲಕ ಹೇಳಿಸಿದೆ. ಒಂದು ವೇಳೆ ಹೆಗಡೆಯವರ ಹೇಳಿಕೆಗೆ ಬಿಜೆಪಿ ವಿರುದ್ಧವಾಗಿದೆ ಎಂದಾಗಿದ್ದರೆ ಇಷ್ಟು ಹೊತ್ತಿಗೆ ಅವರನ್ನು ಅಮಾನತುಗೊಳಿಸಬೇಕಿತ್ತು. ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಮತಗಳಿಂದಾಗಿ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಜನಪರ ನಿಲುವು ನಮ್ಮ ಸಿದ್ಧಾಂತ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಪ್ರಯಾಣಿಕರಿಂದ 2-3 ಪಟ್ಟು ಹೆಚ್ಚು ಪ್ರಯಾಣದರ ವಸೂಲಿ ಮಾಡುತ್ತಿತ್ತು. ಯಾದಗಿರಿಯ ಏಳೆಂಟು ಜನ ಹುಡುಗರು ಪ್ರಿಯಾಂಕ್ ಖರ್ಗೆಯವರ ಮನೆಗೆ ಬಂದಿದ್ದರು.
ಊರಿಗೆ ಹೋಗಲು 700 ರೂ. ಇದ್ದಂತಹ ಬಸ್ ದರವನ್ನು 3 ಪಟ್ಟು ಹೆಚ್ಚಸಿ 2,100 ರೂ. ಮಾಡಿದ್ದಾರೆ. ನಮಗೆ ಅದನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಬಸ್ ವಾಪಸ್ ಖಾಲಿ ಬರಬೇಕು ಮತ್ತು ಒಂದು ಸೀಟು ಅಂತರ ಬಿಟ್ಟು ಪ್ರಯಾಣಿಕರು ಕುಳಿತುಕೊಳ್ಳುವುದರಿಂದ ಕಡಿಮೆ ಜನ ಪ್ರಯಾಣಿಸುತ್ತಾರೆ. ಇದಕ್ಕಾಗಿ ನಷ್ಟವಾಗುವ ಹಣವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಲು ಆಗಿನ ಯಡಿಯೂರಪ್ಪನವರ ಸರ್ಕಾರ ನಿರ್ಧರಿಸಿತ್ತು.
ಪ್ರಿಯಾಂಕ್ ಖರ್ಗೆಯವರ ಮನೆಗೆ ಬಂದ ಯಾದಗಿರಿಯ ಜನರು ನನ್ನ ಮನೆಗೆ ಬಂದಿದ್ದರು. ಅವರ ಕಷ್ಟ ಕೇಳಿ ಆ ಕ್ಷಣವೇ ನಾನು ಒಂದು ವಿಡಿಯೋ ಮಾಡಿದ್ದೆ. ಅದರಲ್ಲಿ ಸರ್ಕಾರ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು, ಇದಕ್ಕಾಗಿ ಕಾಂಗ್ರೆಸ್ ಪಕ್ಷ ಒಂದು ಕೋಟಿ ರೂ.ಗಳ ಹಣ ನೀಡುತ್ತದೆ ಎಂದು ಹೇಳಿದ್ದೆ. ಆಗಿನ ಸರ್ಕಾರದವರು ನಾನು ಕಳುಹಿಸಿದ್ದ ಚೆಕ್ ತೆಗೆದುಕೊಳ್ಳಲಿಲ್ಲ. ಕೊನೆಗೆ ಬಸ್ ನಿಲ್ದಾಣದಲ್ಲಿ ನಾವು ಧರಣಿ ಕುಳಿತಾಗ ಉಚಿತ ಪ್ರಯಾಣದ ಸೌಲಭ್ಯವನ್ನು ಘೋಷಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅನ್ನಭಾಗ್ಯ, ಕ್ಷೀರಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿ ಯೋಜನೆಗಳನ್ನು ಚುನಾವಣೆ ಕಾರಣಕ್ಕಾಗಿ ಮಾಡಿಲ್ಲ. 600 ರೂ. ಇದ್ದಂತಹ ಗ್ಯಾಸ್ ಸಿಲಿಂಡರ್ ಬೆಲೆ 1,200 ರೂ. ಆದಾಗ ಅದನ್ನು ಖರೀದಿಸಲಾಗದೆ ಜನಸಾಮಾನ್ಯರು ಸಂಕಷ್ಟದಲ್ಲಿದ್ದರು. ಅವರ ಕುಟುಂಬಕ್ಕೆ 2000 ದೊರೆಯುವುದರಿಂದ ಎಷ್ಟೋ ಪರಿಹಾರ ಸಿಗುತ್ತದೆ. ಉಚಿತ ವಿದ್ಯುತ್ ಸೌಲಭ್ಯ, ಉಚಿತ ಪ್ರಯಾಣದ ಸೌಲಭ್ಯ ಜನರ ಆರ್ಥಿಕ ಹೊರೆಯನ್ನು ಕುಗ್ಗಿಸಿದೆ. ಮಕ್ಕಳ ಶಿಕ್ಷಣ ಶುಲ್ಕ ಹೆಚ್ಚಾಗಿ ಪರಿತಪಿಸುವವರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ನೆರವಾಗುತ್ತಿವೆ ಎಂದರು.
ಲೋಕಸಭಾ ಚುನಾವಣೆ ಬಳಿಕ ಪಂಚಖಾತ್ರಿ ಯೋಜನೆಗಳು ಸ್ಥಗಿತಗೊಳ್ಳುತ್ತದೆ ಎಂಬುದು ಸಂಪೂರ್ಣ ಅಪಪ್ರಚಾರ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಯಲ್ಲಿ ಕೆಲಸ ಮಾಡದೇ ಆಡಳಿತವಿರೋ ಅಲೆ ಎದುರಿಸುತ್ತಿರುವ 10 ಮಂದಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಯಿಂದ ಬಹಳಷ್ಟು ಮಂದಿ ಕಾಂಗ್ರೆಸ್ ಸೇರ್ಪಡೆಯಾಗಲು ತಯಾರಿದ್ದಾರೆ. ನಿನ್ನೆ ಮೂರು ಮಂದಿ ಬಿಜೆಪಿಯ ಮಾಜಿ ಸಚಿವರು ಕಾಂಗ್ರೆಸ್ ಸೇರಿದ್ದಾರೆ. ಆ ಪಕ್ಷದ ಹಾಲಿ ಸಂಸದರ ಪೈಕಿ ಮೂವರು ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎಂದರು. ಕಾಂಗ್ರೆಸ್ ನಾಯಕತ್ವ ಒಪ್ಪಿಕೊಂಡು ಬರುವ ಎಲ್ಲರಿಗೂ ಮುಕ್ತ ಆಹ್ವಾನ ನೀಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಬೇರೆಬೇರೆಯಾಗಿ ಪ್ರಚಾರ ಮಾಡುತ್ತೇವೆ ಎಂಬುದು ಅಪ್ರಸ್ತುತವಾದ ಸಚಿವ ಸಂಪುಟದಲ್ಲಿ ಕುಳಿತು ಚರ್ಚಿಸುವಂತೆ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ , ನಾನು ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಮಾಡಬೇಕೆಂದು ನಿರ್ಧರಿಸಿದ್ದೇವೆ ಎಂದು ಹೇಳಿದರು.ಇಂದು ಸಿದ್ದರಾಮಯ್ಯ ಮಂಗಳೂರು-ಉಡುಪಿಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ನಾನು ಕಲಬುರಗಿಗೆ ಬಂದಿದ್ದೇನೆ. ನಾಳೆ ಇಬ್ಬರೂ ಒಟ್ಟಾಗಿ ರಾಯಚೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ನಾವು ಹೋರಾಟ ಮಾಡುತ್ತೇವೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ನಾನು ಸ್ಪರ್ಧೆ ಮಾಡಿದ್ದೆ. ಮತ್ತೊಂದು ಚುನಾವಣೆಯಲ್ಲಿ ಒಬ್ಬ ಹೆಣ್ಣುಮಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದ್ದೆ. ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇವೆ ಎಂದರು.
ದೇವೇಗೌಡರ ಕುಟುಂಬದಿಂದ ಯಾರೇ ಚುನಾವಣೆಗೆ ನಿಂತರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಡಾ.ಮಂಜುನಾಥ್ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿದ್ದಾಗ ಹಲವು ಬಾರಿ ಮುಂದುವರೆಸಿದ್ದೇವೆ. ಈ ಬಾರಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ರ್ಪಸುತ್ತಾರೆ ಎಂದು ಹೇಳಲಾಗುತ್ತಿದೆ. ನಾವು ಸಿದ್ಧಾಂತದ ಮೇಲೆ ಚುನಾವಣೆ ನಡೆಸುತ್ತೇವೆ. ಯಾರೇ ಸಿದ್ದಾಂತ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.