Saturday, November 23, 2024
Homeರಾಜಕೀಯ | Politicsಬಿಜೆಪಿ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕುರಿತು ಏಕೆ ತನಿಖೆ ಮಾಡಲಿಲ್ಲ..?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕುರಿತು ಏಕೆ ತನಿಖೆ ಮಾಡಲಿಲ್ಲ..?

ಹುಬ್ಬಳ್ಳಿ,ಮಾ.6- ನಮ್ಮ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಬಿಜೆಪಿ ತನ್ನ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದಾಗ ತನಿಖೆಯೇ ನಡೆಸಲಿಲ್ಲ. ಅವರಿಗೆ ದೇಶದ ಬಗ್ಗೆ ಬದ್ಧತೆ ಇದೆಯಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರ ಆಗ್ರಹ ಕುರಿತು ಪ್ರಶ್ನೆ ಎದುರಾದಾಗ ಉತ್ತರಿಸಿದ ಅವರು, ಅವರಿಗೆ ರಾಜೀನಾಮೆ ಯಾವಾಗ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕೆಂದು ಕೇಳಿ. ರಾಜೀನಾಮೆ ಕೊಡೋಣ ಎಂದು ವ್ಯಂಗ್ಯವಾಗಿ ಹೇಳಿದರು.

ಇದಕ್ಕೂ ಮೊದಲು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗ ಬಿಜೆಪಿ ಸರ್ಕಾರ ಅವರನ್ನು ಯಾಕೆ ಬಂಧನ ಮಾಡಲಿಲ್ಲ? ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದರು. ಈ ಪ್ರಕರಣಕ್ಕೆ ಯಾವುದೇ ಎಫ್ಎಸ್ಎಲ್ ವರದಿ ಅವಶ್ಯಕತೆ ಇಲ್ಲ. ನಾವು ರಾಜಕೀಯ ಮಾಡಬಾರದು ಎಂದು ಸುಮ್ಮನೆ ಇz್ದÉವು. ಅವರ ಈ ಢೋಂಗಿ ಆಟಗಳನ್ನು ನೋಡಿ ನಮ್ಮ ಸ್ಥಳೀಯ ಶಾಸಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದರು.

ಕೊಲೆ ಕೊಲೆಯೇ, ಕಳ್ಳತನ ಕಳ್ಳತನವೇ, ನುಡಿಮುತ್ತು ನುಡಿಮುತ್ತೇ ಅಲ್ಲವೇ? ದೇಶದ್ರೋಹ ದೇಶದ್ರೋಹವೇ ಅಲ್ಲವೇ? ನಮ್ಮ ಸರ್ಕಾರದಲ್ಲಿ ಘೋಷಣೆ ಕೂಗಿದವರ ವಿರುದ್ಧ ವಿಚಾರಣೆ ನಡೆಸುತ್ತಿದ್ದೇವೆ. ದೇಶದ ಬಗ್ಗೆ ಬದ್ಧತೆ ನಮಗಿದೆಯೋ? ಬಿಜೆಪಿಯವರಿಗೆ ಇದೆಯೋ? ಎಂದು ತಿರುಗೇಟು ನೀಡಿದರು.

ಬಜೆಟ್ನಲ್ಲಿ ಅಭಿವೃದ್ಧಿಗೆ 1.26 ಲಕ್ಷ ಕೋಟಿ ಅನುದಾನ:
ಅಥಣಿಯಲ್ಲಿ 1 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾವು ತೆರಳುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಆಗಮಿಸುತ್ತಿದ್ದಾರೆ. ಬಜೆಟ್ನಲ್ಲಿ 1.26 ಲಕ್ಷ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಇಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಇನ್ನೊಂದು ರೀತಿ, ಬಿಡುಗಡೆಯಾದಾಗ ಮತ್ತೊಂದು ರೀತಿ ತೋರಿಸುತ್ತೀರಿ. ಈಗ ನನ್ನ ವಿರುದ್ಧದ ಪ್ರಕರಣ ರದ್ದಾದ ಮೇಲೆ ಸುಮ್ಮನೇ ಇದ್ದೀರ ಎಂದು ವ್ಯಂಗ್ಯವಾಡಿದರು.

ನಾಳೆ ದೆಹಲಿಯಲ್ಲಿ ಸಭೆ:
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಳಿದಾಗ, ನಾಳೆ ಪಕ್ಷದ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಬಿಜೆಪಿಯ ಹಲವರು ಸಂಪರ್ಕದಲ್ಲಿ:
ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್ಗೆ ಆಗಮಿಸಲಿದ್ದಾರೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ಸದ್ಯದಲ್ಲೇ ಶೆಟ್ಟರ್ ಪಶ್ಚಾತಾಪ:
ಕಾಂಗ್ರೆಸ್ನಿಂದ ಬಿಜೆಪಿಗೆ ನಾಯಕರ ಮಹಾಪೂರವೇ ಹರಿದುಬರಲಿದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಶೀಘ್ರವೇ ಪಶ್ಚಾತ್ತಾಪ ಕಾಡಲಿದೆ ಎಂದು ತಿರುಗೇಟು ನೀಡಿದರು.

ಪ್ರಹ್ಲಾದ್ ಜೋಶಿ ಅನುಮತಿ ಕೊಡಿಸಲಿ:
ಮಹದಾಯಿ ಕಾಮಗಾರಿ ವಿಳಂಬದ ಬಗ್ಗೆ ಕೇಳಿದಾಗ, ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ನೀಡಬೇಕು. ಮಹದಾಯಿಗೆ ಅನುಮತಿ ದೊರೆತಿದೆ ಎಂದು ಈ ಮೊದಲು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ಆದರೂ ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆಯಾಗಿಲ್ಲ ಎಂದು ಪ್ರಶ್ನಿಸಿದರು.

ನಾನು ಜಲಸಂಪನ್ಮೂಲ ಸಚಿವನಾದ ನಂತರ ಮಹಾದಾಯಿ ಯೋಜನೆಗೆ ಟೆಂಡರ್ ಕರೆದಿದ್ದೇನೆ. ಕೇಂದ್ರದಿಂದ ಅನುಮತಿ ದೊರೆಯುತ್ತಿದ್ದಂತೆ ಕೆಲಸ ಆರಂಭವಾಗಲಿದೆ. ಅನುಮತಿ ಕೊಡಿಸುವ ಜವಾಬ್ದಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲಿದೆ. ಈ ಕೆಲಸ ಮಾಡಿದರೆ ಅವರಿಗೂ ಒಂದು ಗೌರವವಿರುತ್ತದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಜೋಶಿ ಅವರಿಗೆ ಅಧಿಕಾರ ಇದೆ. ಅವರು ಅರ್ಧ ಗಂಟೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಕೆಲಸ ಆರಂಭಿಸಲು ಸಾಧ್ಯವಾಗುತ್ತದೆ ಎಂದರು.

ಮಹದಾಯಿ ವಿಚಾರದಲ್ಲಿ ಮಾಧ್ಯಮಗಳು ನನಗೆ ಉಲ್ಟಾ ಪಲ್ಟಾ ನನಗೆ ಪ್ರಶ್ನೆ ಕೇಳುತ್ತವೆ. ಅದೇ ಪ್ರಶ್ನೆಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಏಕೆ ಕೇಳುವುದಿಲ್ಲ? ಪ್ರಹ್ಲಾದ್ ಜೋಶಿಯವರು ಈ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

RELATED ARTICLES

Latest News