ಬೆಂಗಳೂರು,ಆ.24– ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟನಲ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆ ಪ್ರಪಂಚದ 7ನೇ ಅದ್ಭುತಗಳಲ್ಲಿ ಒಂದು ಎಂದು ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ಒಂದು ವಾರ್ಡ್‌ಗೆ 15 ಲಕ್ಷ ರೂ. ಕೊಡುತ್ತಿದ್ದಾರೆ. 224 ಕಿಲೋ ಮೀಟರ್‌ಗೆ 15 ಲಕ್ಷ ರೂ. ಭಾಗ ಮಾಡಿದರೆ 4 ಗುಂಡಿಯನ್ನು ಮುಚ್ಚಲು ಆಗುವುದಿಲ್ಲ. ಇನ್ನು ಟನಲ್ ರಸ್ತೆ ಮಾಡಿದರೆ, ಏಳು ಅದ್ಭುತಗಳಲ್ಲಿ ಇದು ಏಂಟನೇ ಅದ್ಬುತವಾಗಲಿದೆ ಎಂದು ಟೀಕಿಸಿದರು.
ನೀರಿನ ಬೆಲೆ ಹೆಚ್ಚು ಮಾಡಿದ್ದಾರೆ. ನೀರು ಕೊಟ್ಟು ನೀರಿನ ಬೆಲೆ ಹೆಚ್ಚಿಸಿದರೆ ಪರವಾಗಿಲ್ಲ. ಕೊಳಾಯಿ ತಿರುಗಿಸಿದ ತಕ್ಷಣವೇ ಗಾಳಿ ಬರುತ್ತದೆ. ಗಾಳಿ ಬಂದ ತಕ್ಷಣ ಮೀಟರ್ ಓಡುತ್ತದೆ. ಆ ಗಾಳಿಗೂ ಸಹ ದುಡ್ಡು ಕೊಡಬೇಕು. ನೀರಿಗೂ ದುಡ್ಡು, ಗಾಳಿಗೂ ದುಡ್ಡು, ಕೊಡಬೇಕು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಗೆ ದುಡ್ಡಿಲ್ಲ. ಹಾಗಾಗಿ ನೀರಿನ ದರ ಏರಿಕೆ ಮಾಡುತ್ತಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಏನೊ ಮಾಡಬೇಕು ಅಂದುಕೊಂಡಿದ್ದರೋ ಅದೂ ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿಗರಿಗೆ ಕೃತಜ್ಞತೆ ಇಲ್ಲ. ಇವರಿಗೆ ಏನೂ ಮಾಡಬಾರದು ಕೃತಜ್ಞತೆ ಇಲ್ಲ ಎಂದಿದ್ದಾರೆ. ಇವರು ಏನ್ ಹೇಳಿದರೂ ಕೇಳ್ಬೇಕು, ನಾವು ಹೇಳಿದ್ದನ್ನೇ ಒಪ್ಪಿಕೊಳ್ಳಬೇಕು. ಹೇಳಿದಂತೆ ಕೇಳಿದರೆ ಇವರಿಗೆ ಒಳ್ಳೆಯವರು ಎಂದು ಮುನಿರತ್ನ ತಿರುಗೇಟು ಕೊಟ್ಟರು.