ಬೆಂಗಳೂರು, ನ.21- ಬ್ಲೂಫಿಲಂ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಡುತ್ತಿರುವ ಆರೋಪ ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ನೀವು ಏನು ಮಾಡಿಕೊಳ್ಳುತ್ತೀರಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಜನರ ನಡುವೆ ನಗೆ ಪಾಟಲಿಗೆ ಈಡಾಗುತ್ತಿದ್ದಾರೆ ಎಂದರು. ರಾಜಕಾರಣದಲ್ಲಿ ನಾನು ಅಂತ ಕೆಲಸ ಮಾಡಿಲ್ಲ, ಮಾಡಿದ್ದನ್ನು ಸಾಬೀತು ಪಡಿಸಿ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅವರ ತಂದೆ ತಮ್ಮ ವಿರುದ್ಧ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಆಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಂದರೆ ಒಂದು ಘನತೆ, ಗೌರವ ಇರಬೇಕು. ಕುಮಾರಸ್ವಾಮಿ ಹತಾಶರಾಗಿ ನೀಡುತ್ತಿರುವ ಹೇಳಿಕೆಗಳು ಅವರನ್ನು ನಾಚಿಕೆಗೀಡು ಮಾಡುತ್ತಿವೆ ಎಂದರು.
ಕುಮಾರಸ್ವಾಮಿಯವರು ಕನಕಪುರಕ್ಕೆ ಹೋಗಲಿ ನಮ್ಮ ಪಕ್ಷದ ಕಾರ್ಯಕರ್ತರು ಬೇಡ, ಅವರ ಪಕ್ಷ ಕಾರ್ಯಕರ್ತರನ್ನೇ ಕೇಳಿ ನನ್ನ ಬಗ್ಗೆ ತಿಳಿದುಕೊಳ್ಳಲಿ. ಕನಕಪುರದ ಜನ ನಾನು ಚುನಾವಣೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡದೆ ಇದ್ದರೂ 1.23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈವರೆಗೂ ಸಾಕಿ ಸಲಹಿದ್ದಾರೆ ಎಂದರು.
ಕುಮಾರಸ್ವಾಮಿಯವರ ವರ್ತನೆ ಸರಿಯಲ್ಲ. ಕುಮಾರಸ್ವಾಮಿ ವಿರುದ್ಧ ನಡೆದಿರುವ ಪೋಸ್ಟರ್ ವಾರ್ ಬಗ್ಗೆಯೂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಯಾರೇ ಇಂತಹ ಕೆಲಸ ಮಾಡಿದ್ದರೂ ಅದು ತಪ್ಪು. ಅಂತ ಕೀಳು ರಾಜಕಾರಣಕ್ಕೆ ನಾನು ಪ್ರೋತ್ಸಾಹ ಕೊಡುವುದಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯದಲ್ಲಿ ಬರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸ ಮಾಡುವವರನ್ನು ಬೇಡ ಎನ್ನಲ್ಲ. ಪ್ರವಾಸ ಮಾಡುವ ಜೊತೆಗೆ ಎಲ್ಲರನ್ನು ಕರೆದು ಕೊಂಡು ದೆಹಲಿಗೆ ಹೋಗಲಿ, ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದರು.
ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿಯಡಿ 150 ದಿನಕ್ಕೆ ಹೆಚ್ಚಿಸಲು ಅವಕಾಶ ಇದೆ. ಅದಕ್ಕೆ ಮಂಜೂರಾತಿ ಮಾಡಿಸಲಿ, ಅದರ ಜೊತೆಗೆ ಪ್ರವಾಸ ಮಾಡಲಿ, ಪಕ್ಷ ಕಟ್ಟಲಿ ಅದಕ್ಕೂ ಮೊದಲು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ. ಆಗ ಇವರು ಒಳ್ಳೆಯದು ಮಾಡ್ತಾರೆ ಎಂದು ಕೊಳ್ಳುತ್ತೇವೆ ಎಂದರು.
ಕೇಂದ್ರದ ಹಣ ಬಿಡುಗಡೆ ವಿಳಂಬವಾದರೆ ರಾಜ್ಯ ಸರ್ಕಾರದಿಂದಲೇ ಬರ ಪರಿಹಾರ: ಸಚಿವ ಚಲುವರಾಯಸ್ವಾಮಿ
ಬೆಂಗಳೂರಿನಲ್ಲಿ ವಿದ್ಯುತ್ ಶಾಕ್‍ನಿಂದ ತಾಯಿ ಮಗು ಸಾವು ಗಂಭೀರ ವಿಚಾರವಾಗಿದೆ. ಇದು ನಮ್ಮ ಗಮನದಲ್ಲಿದೆ, ಹಾದಿಯಲ್ಲಿ ಬಿದ್ದಿರುವ ಅಪಾಯಕಾರಿ ಕೇಬಲ್‍ಗಳನ್ನು ತೆಗೆಯಲು ಆಗ್ರಹಗಳು ಬರುತ್ತಿವೆ. ಅದರ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ ಆ ರೀತಿಯ ಕೇಬಲ್‍ಗಳನ್ನು ಕತ್ತರಿಸಿದ ತಕ್ಷಣ ಟಿವಿಯ ಸಂಪರ್ಕಗಳು ಕಡಿತಗೊಳ್ಳುತ್ತವೆ. ನಮಗೆ ಟಿವಿಯವರದೆ ಕಾಟವಾಗಿದೆ, ಟಿವಿಯವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಈ ರೀತಿಯ ಕೇಬಲ್‍ಗಳನ್ನು ಉಳಿಸಿಕೊಂಡಿದ್ದೇವೆ. ನಿನ್ನೆ ಮುದ್ರಣ ಮಾಧ್ಯಮದವರು ನಮಗೆ ಸೇರಿದ ಕೇಬಲ್‍ಗಳನ್ನು ಕತ್ತರಿಸಿ ಅಡ್ಡಿ ಪಡಿಸುವುದಿಲ್ಲ ಎಂದಿದ್ದಾರೆ. ಟಿವಿಯವರು ಒಪ್ಪಿಕೊಂಡರೆ ಸಂಜೆಯ ಒಳಗೆ ಎಲ್ಲವನ್ನೂ ಕತ್ತರಿಸಿ ಹಾಕುತ್ತೇವೆ ಎಂದರು.
ವಿದ್ಯುತ್‍ನಿಂದ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡುತ್ತಿರುವ ಹಾಗೂ ಅದನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಪಕ್ಷದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅವರು ಬಂದು ಹೋದ ಮೇಲೆ ಎಲ್ಲಾ ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಸಭೆಯಲ್ಲಿ ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತೇನೆ.
ಉದ್ಯಮಿಗಳು, ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ
ಕಾರ್ಯಕರ್ತರು ಸೇರಿದಂತೆ ಎಲ್ಲರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕಿದೆ. ಆದರೆ ಎಲ್ಲರಿಗೂ ಒಮ್ಮೆಲೆ ಅವಕಾಶ ನೀಡಲಾಗುವುದಿಲ್ಲ. ಎರಡು ಮೂರು ಹಂತದಲ್ಲಿ ನೇಮಕಾತಿಗಳಾಗುತ್ತವೆ ಎಂದರು.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್ ಶಾಸಕರು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನಗೆ ಗೊತ್ತಿಲ್ಲ ಎಂದರು.