ಬೆಂಗಳೂರು,ಮಾ.26- ಲೋಕಸಭಾ ಚುನಾವಣೆ ಪ್ರಚಾರಕ್ಕೂ ಮುನ್ನ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೇವಸ್ಥಾನಗಳ ಭೇಟಿಗೆ ಮುಂದಾಗಿದ್ದಾರೆ. ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ದೇವರ ದರ್ಶನ ಪಡೆದ ಬಳಿಕ ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿಯ ಶಾರದಾಂಬೆ, ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮ, ಸಂಜೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ನಾಳೆ ಕುಮುಟಾದ ಇಡಗುಂಜಿ ಗಣಪತಿ ದೇವಸ್ಥಾನಕ್ಕೆ, ಮೈಸೂರಿನ ಚಾಮುಂಡೇಶ್ವರಿ ಅದಕ್ಕೂ ಮೊದಲು ಕಬ್ಬಾಳಮ್ಮ, ಕೆಂಕೇರಮ್ಮ ದೇವಸ್ಥಾನಗಳಿಗೆ ದಿಢೀರ್ ಭೇಟಿ ನೀಡುತ್ತಿದ್ದಾರೆ.ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ಧರ್ಮಯುದ್ಧ ಪ್ರಾರಂಭವಾಗುತ್ತಿದೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಖಂಡಿತ ಫಲ ಸಿಗುತ್ತದೆ. ನಾನು ಧರ್ಮವನ್ನು ನಂಬುತ್ತೇನೆ. ನಮ್ಮ ನಂಬಿಕೆಗಳ ಮೇಲೆ ಬದುಕುತ್ತೇವೆ ಎಂದರು.
ಎಲ್ಲರೂ ಮಾಡುವುದು ನೆಮ್ಮದಿ, ಶಾಂತಿಗಾಗಿ. ಹೀಗಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ನಾನು ನನ್ನ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.ಈ ಮೊದಲು ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಧರ್ಮಸ್ಥಳಕ್ಕೆ ಬಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಅದಕ್ಕೆ ತಕ್ಕ ಹಾಗೆ ಶಕ್ತಿ ಬಂದಿದೆ ಎಂದರು.