Tuesday, January 14, 2025
Homeರಾಜಕೀಯ | Politicsಕಾಂಗ್ರೆಸ್‌‍ನಲ್ಲಿ ಕಚ್ಚಾಟ : ಶಾಸಕಾಂಗ ಸಭೆಯಲ್ಲಿ ಡಿಕೆಶಿ-ಸತೀಶ್‌ ಜಾರಕಿಹೊಳಿ ನಡುವಿನ ಅಸಮಾಧಾನ ಸ್ಫೋಟ

ಕಾಂಗ್ರೆಸ್‌‍ನಲ್ಲಿ ಕಚ್ಚಾಟ : ಶಾಸಕಾಂಗ ಸಭೆಯಲ್ಲಿ ಡಿಕೆಶಿ-ಸತೀಶ್‌ ಜಾರಕಿಹೊಳಿ ನಡುವಿನ ಅಸಮಾಧಾನ ಸ್ಫೋಟ

DK Shivakumar Vs Satish Jarkiholi

ಬೆಂಗಳೂರು,ಜ.14– ಕಾಂಗ್ರೆಸ್‌‍ನ ಶಾಸಕಾಂಗ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಡುವೆ ಬಹಳ ದಿನದಿಂದ ಮಡುಗಟ್ಟಿದ ಅಸಮಾಧಾನ ಸ್ಫೋಟಗೊಂಡಿದ್ದು, ರಾಜ್ಯ ಕಾಂಗ್ರೆಸ್‌‍ನಲ್ಲಿ ಯಾವುದೂ ಸರಿ ಇಲ್ಲ ಎಂಬುದು ಮತ್ತೊಮೆ ಸಾಬೀತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಬಣ ರಾಜಕೀಯಗಳು ಮೊದಲಿನಿಂದಲೂ ಹೊಗೆಯಾಡುತ್ತಲೇ ಇದೆ. ಇಬ್ಬರೂ ತಮ ಹಿಂಬಾಲಕರು ಅಥವಾ ಬೆಂಬಲಿಗರನ್ನು ಪರಸ್ಪರ ಹೊಗಳುವುದು, ಮುನ್ನೆಲೆಗೆ ತರಲು ಪ್ರಯತ್ನಿಸುವುದು ನಡೆದೇ ಇದೆ. ನಿನ್ನೆ ಶಾಸಕಾಂಗ ಸಭೆಯಲ್ಲೂ ಇದೇ ರೀತಿಯ ಬೆಳವಣಿಗೆಗಳಾಗಿದ್ದು, ಅದಕ್ಕೆ ಸತೀಶ್‌ ಜಾರಕಿಹೊಳಿ ತತ್‌ಕ್ಷಣವೇ ಪ್ರತಿಕ್ರಿಯಿಸಿದ್ದರಿಂದಾಗಿ ಗೊಂದಲ ಉಂಟಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಕ್ಷದ ಶಾಸಕರು, ಸಚಿವರು ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್‌‍ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಪಕ್ಷದ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ವಿಷಯ ಪ್ರಸ್ತಾಪಿಸಿದರು.

ಈ ಹಂತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ಪಕ್ಷದ ಕಚೇರಿ ನಿರ್ಮಾಣ ಉದಾಹರಣೆಯನ್ನಾಗಿ ನೀಡಿ ಲಕ್ಷ್ಮೀಹೆಬ್ಬಾಳ್ಕರ್‌ ಅವರು ಸಚಿವರಾದ ಬಳಿಕ ಕಟ್ಟಡ ನಿರ್ಮಾಣ ಚುರುಕಾಗಿ ಮುಗಿದಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.ಈ ವೇಳೆ ಅಸಹನೆಗೀಡಾದ ಸತೀಶ್‌ ಜಾರಕಿಹೊಳಿಯವರು ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಪ್ರತಿರೋಧಿಸಿದ್ದಾರೆ.

ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್‌‍ ಕಚೇರಿಗೆ ನಿವೇಶನ ಒದಗಿಸಿದ್ದು, ಈ ಹಿಂದೆ ಕಾಂಗ್ರೆಸ್‌‍ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ, ಕಟ್ಟಡ ನಿರ್ಮಾಣಕ್ಕೆ ತಾವು 3 ಕೋಟಿ ರೂ. ಸ್ವಂತ ಹಣವನ್ನು ಖರ್ಚು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷರು ವಾಸ್ತವಾಂಶವನ್ನು ಮರೆಮಾಚಿ ತಪ್ಪು ಮಾಹಿತಿ ನೀಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ವೇಳೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಮಧ್ಯಪ್ರವೇಶ ಮಾಡಿ, ತಾವು ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಾಕಿ ಇದ್ದ ಹಣಕಾಸು ಸೌಲಭ್ಯ ಒದಗಿಸಿದ್ದು, ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಎಲ್ಲಾ ಸೇರಿ ಸರಿಸುಮಾರು 7 ಕೋಟಿ ರೂ.ಗಳಷ್ಟು ಸಂಪನೂಲವನ್ನು ದಾನಿಗಳ ಸಹಕಾರದಿಂದ ಒದಗಿಸಿದ್ದೇನೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಕಟ್ಟಡ ಪೂರ್ಣಗೊಂಡಿದೆ. ಕಚೇರಿ ಸಿಕ್ಕಿದೆ. ಇದು ಸಂತೋಷದ ವಿಚಾರ. ಹೆಚ್ಚಿನ ಚರ್ಚೆ ಬೇಡ ಎಂದು ಸಲಹೆ ನೀಡಿದ್ದಲ್ಲದೆ, ಇತರ ಜಿಲ್ಲೆಗಳಲ್ಲೂ ಇದೇ ರೀತಿ ಕಾಂಗ್ರೆಸ್‌‍ ಕಚೇರಿ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣ ಕಾಂಗ್ರೆಸ್‌‍ನಲ್ಲಿ ಸದಾಕಾಲ ವಿವಾದ ಕೇಂದ್ರಬಿಂದುವಾಗಿಯೇ ಉಳಿದಿದೆ. ಈ ಹಿಂದೆ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌‍-ಕಾಂಗ್ರೆಸ್‌‍ ಸಮಿಶ್ರ ಸರ್ಕಾರವನ್ನು ಪತನಗೊಳಿಸಲು ಬೆಳಗಾವಿ ಜಿಲ್ಲಾ ರಾಜಕಾರಣವೇ ಮೂಲವಾಗಿತ್ತು.ಬೆಳಗಾವಿಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್‌ ಸಚಿವರಾದ ಬಳಿಕವಂತೂ ಜಾರಕಿಹೊಳಿ ಸಹೋದರರು ಒಳಗೊಳಗೇ ಒಗ್ಗಟ್ಟಾಗಿ ಹಲ್ಲು ಮಸೆಯುತ್ತಿರುವುದು ಸಾಮಾನ್ಯವಾಗಿದೆ.

ಲಕ್ಷ್ಮೀಹೆಬ್ಬಾಳ್ಕರ್‌ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ನಾಯಕರ ಬೆಂಬಲ ಪಡೆದು ಜಾರಕಿ ಹೊಳಿ ಸಹೋದರರಿಗೆ ಸೆಡ್ಡು ಹೊಡೆಯಲು ಯತ್ನಿಸುತ್ತಿದ್ದಾರೆ.ಈ ಜಿದ್ದಾಜಿದ್ದಿ ಹಲವಾರು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಅಸಹನೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅಸಮಾಧಾನ ಮಡುಗಟ್ಟಿದೆ.

ಸತೀಶ್‌ ಜಾರಕಿಹೊಳಿಯವರಂತೂ ಸದಾಕಾಲ ಪಕ್ಷ ಎಂದ ಮೇಲೆ ಅಸಮಾಧಾನ ಸಹಜ, ಎಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳುವುದು ಸಿನಿ ಕಥನ ಎಂದು ಹೇಳುತ್ತಲೇ ಕಾಂಗ್ರೆಸ್‌‍ನಲ್ಲಿರುವ ಗುಂಪುಗಾರಿಕೆಯನ್ನು ಹೊರಹಾಕುತ್ತಿದ್ದಾರೆ.ಇದು ನಿನ್ನೆ ಶಾಸಕಾಂಗ ಸಭೆಯಲ್ಲೂ ಪ್ರಸ್ತಾಪಗೊಂಡಿರುವುದು ಹೊಸ ಬೆಳವಣಿಗೆಯಾಗಿದೆ.

RELATED ARTICLES

Latest News