Friday, November 22, 2024
Homeರಾಜಕೀಯ | Politicsಯಡಿಯೂರಪ್ಪಗೆ ಡಿಕೆಶಿ ತಿರುಗೇಟು

ಯಡಿಯೂರಪ್ಪಗೆ ಡಿಕೆಶಿ ತಿರುಗೇಟು

ಬೆಂಗಳೂರು,ಏ.11- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಕ್ಕಾಗಿರುವ ತೆರಿಗೆ ಅನ್ಯಾಯ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳ ಕುರಿತು ಮೊದಲು ಉತ್ತರ ಕೊಡಲಿ, ಅದನ್ನು ಬಿಟ್ಟು ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿ ದಾರಿ ತಪ್ಪಿಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಗಳಿಗೆ ತಿರುಗೇಟು ನೀಡಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದ್ದು ಏಕೆ? ಬರಪರಿಸ್ಥಿತಿ ಇದ್ದರೂ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗದಿರುವುದು ಏಕೆ ಎಂಬ ವಿಚಾರಗಳ ಕುರಿತು ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

ಎಚ್ಎಎಲ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ಮುಚ್ಚುತ್ತದೆ ಎಂದು ಈ ಹಿಂದೆ ರಾಹುಲ್ಗಾಂಧಿ ಆರೋಪಿಸಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದ ಕ್ರಮಗಳಿಂದಾಗಿ ಎಚ್ಎಎಲ್ ಲಾಭದಲ್ಲಿದೆ, ತಪ್ಪು ಹೇಳಿಕೆ ನೀಡಿದ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು, ಡಿ.ಕೆ.ಶಿವಕುಮಾರ್ ಅವರಿಂದ ಕ್ಷಮೆ ಕೇಳಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಅನಗತ್ಯವಾದ ವಿಷಯಾಂತರ ಬೇಡ. ಬರಪರಿಸ್ಥಿತಿಗೆ ಹಣ ನೀಡದೇ ಇರುವುದು ಏಕೆ ಎಂದು ಜನರಿಗೆ ಉತ್ತರ ಹೇಳಲಿ ಎಂದರು. ಕಾಂಗ್ರೆಸ್ನಲ್ಲಿ ನಾಯಕರುಗಳ ಕೊರತೆ ಇದೆ. ಅದಕ್ಕಾಗಿ ರಾಹುಲ್ಗಾಂಧಿಯವರ ಹೆಸರಿನಲ್ಲಿ ಮತ ಕೇಳುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬಂದಿದ್ದಾಗ ಅವರ ಹೆಸರಿನಲ್ಲಿ ಮತ ಕೇಳಲಿಲ್ಲ. ಯಡಿಯೂರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಹೆಸರಿನಲ್ಲಿ ಮತ ಯಾಚನೆ ಮಾಡಿದ್ದರು. ಅದರರ್ಥ ಮೋದಿಯವರು ವರ್ಚಸ್ಸು ಕಳೆದುಕೊಂಡಿದ್ದಾರೆ ಎಂದಲ್ಲವೇ? ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪರವಾಗಿ ಜನಾಭಿಪ್ರಾಯವಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ತಾವು ರಾಜಕೀಯಕ್ಕೆ ಎಳೆದು ತರಲಿಲ್ಲ. ಅವರಿಂದ ಯಾವುದೇ ಉತ್ತರವನ್ನೂ ಬಯಸಿಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಬಿಜೆಪಿ ನಾಯಕರ ಜೊತೆ ಮಠಕ್ಕೆ ಭೇಟಿ ನೀಡಿದ್ದ ಬಗ್ಗೆ ತಮ್ಮ ಆಕ್ಷೇಪವಿದೆ. ಕುಮಾರಸ್ವಾಮಿಯವರು ಅಥವಾ ಜೆಡಿಎಸ್ನ ನಾಯಕರು ಪ್ರತ್ಯೇಕವಾಗಿ ಮಠಕ್ಕೆ ಹೋಗಿದ್ದರೆ ನಮ್ಮ ಅಭ್ಯಂತರವಿಲ್ಲ ಎಂದರು.

ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ ಅವರನ್ನು ಕೆಪಿಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದ್ದು, ಪಕ್ಷದ ವಕ್ತಾರರಾಗಿಯೂ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

RELATED ARTICLES

Latest News