Thursday, November 6, 2025
Homeರಾಜ್ಯಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ

ಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ

DK Shivakumar warn Block Congress presidents

ಬೆಂಗಳೂರು, ನ.6- ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಿ ಸಂಗ್ರಹ ಅಭಿಯಾನದಲ್ಲಿ ಕೆಲಸ ಮಾಡದೇ ಇರುವ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ನಿರ್ಧಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಹಾಗೂ ಶಾಸಕರ ವಿರುದ್ಧ ಕೂಡ ಹೈಕಮಾಂಡ್‌ಗೆ ವರದಿ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿ ದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರವಾದ ವಿಚಾರ. ರಾಹುಲ್‌ ಗಾಂಧಿ ಅವರು ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹರಿಯಾಣದ ಮತಗಳ್ಳತನವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದಾರೆ. ಕರ್ನಾಟಕದಲ್ಲೂ ಮತಗಳ್ಳತನವಾಗಿರುವ ಉದಾಹರಣೆಗಳಿವೆ ಎಂದರು.

ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ರಾಜ್ಯ ಹಾಗೂ ದೇಶಾದ್ಯಂತ ಸಂಗ್ರಹಿಸಿರುವ ಸಹಿಗಳನ್ನು ಇದೇ 9 ರಂದು ದೆಹಲಿಗೆ ತರಲಾಗುವುದು. ಅದನ್ನು ಎಐಸಿಸಿ ಕ್ರೊಢೀಕರಿಸಿ ಪಕ್ಷದ ವರಿಷ್ಠರು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ ಎಂದರು.
ಎಐಸಿಸಿಯ ಮುಖಂಡರು ನಿನ್ನೆ ರಾತ್ರಿ ಕೂಡ ಝೂಮ್‌ ಮೀಟಿಂಗ್‌ನಲ್ಲಿ ಸಭೆ ನಡೆಸಿ, ಮತಗಳ್ಳತನ ಪ್ರಕರಣದಲ್ಲಿ ಕೆಲಸ ಮಾಡದೇ ಇರುವವರನ್ನು ಮುಲಾಜಿಲ್ಲದೆ, ಸಮಯಕೊಡದೆ ವಜಾಗೊಳಿಸಿ ಎಂದಿದ್ದಾರೆ.

ಶಾಸಕರು, ಸಚಿವರ ಬಗ್ಗೆ ಪಕ್ಷಕ್ಕೆ ವರದಿ ನೀಡಿ ಎಂದು ಸೂಚಿಸಲಾಗಿದೆ. ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ, ಕ್ರಮತೆಗೆದುಕೊಳ್ಳುತ್ತೇನೆ. ಕೆಲವು ಶಾಸಕರು ಕೆಲಸ ಮಾಡಿಲ್ಲ, ಅವರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗುವುದು. ಅನಂತರವೂ ಎಚ್ಚೆತ್ತುಕೊಳ್ಳದೇ ಹೋದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಕರ್ನಾಟಕದಲ್ಲಿ ಇಲ್ಲಿವರೆಗೂ ಸುಮಾರು 80 ಲಕ್ಷ ಸಹಿ ಸಂಗ್ರಹವಾಗಿದೆ. ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ದೇವರಿದ್ದಂತೆ. ಅವರಿಗೆ ವಿಷಯ ತಿಳಿಸುತ್ತೇವೆ ಎಂದರು.ಬೆಂಗಳೂರು ಗ್ರಾಮಾಂತರ ಲೋಕಾಸಭಾ ಕ್ಷೇತ್ರಕ್ಕೆ ಒಳಪಡುವ ಕನಕಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಏನಾಗಿದೆ ಎಂದು ಗೊತ್ತಿದೆ. ಸೋಲಾಗಿರುವುದರಿಂದ ಆ ಕ್ಷೇತ್ರದ ಬಗ್ಗೆ ಚರ್ಚೆ ಮಾಡುವುದು ಸೂಕ್ತವಲ್ಲ, ಕೆಲವು ಕಡೆ ಬೂತ್‌ ಏಜೆಂಟರ್‌ಗಳೇ ಇರಲಿಲ್ಲ ಎಂದರು.
ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರ, ಹರಿಯಾಣ ಬೇರೆ ಬೇರೆ ರಾಜ್ಯಗಳಲ್ಲೂ ಮತಗಳ್ಳತನವಾಗಿದೆ. ಒಂದೊಂದೇ ಕ್ಷೇತ್ರಗಳಿಂದಲೂ ಮಾಹಿತಿಯನ್ನು ತಂದುಕೊಡು ತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾವೇರಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪೀಠ ಸ್ಥಾಪಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಅದಕ್ಕಾಗಿ ಗುರುವಾರ ಸಮಯ ನೀಡಲಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಸರಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟವಟಿಕೆಗಳು ನಡೆಯಬೇಕಾದರೆ ಅನುಮತಿ ಪಡೆಯಬೇಕೆಂದು ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಹಿಂದಿನ ಜಗದೀಶ್‌ಶೆಟ್ಟರ್‌ ಅವರ ಸರ್ಕಾರದ ಆದೇಶವನ್ನೇ ಪುನರ್‌ ಜಾರಿಗೊಳಿಸಿದ್ದೇವೆ. ಎಲ್ಲಿಯೂ ಆರ್‌ಎಸ್‌‍ಎಸ್‌‍ ಹೆಸರನ್ನು ಉಲ್ಲೇಖಿಸಿಲ್ಲ. ಈ ವಿಚಾರವಾಗಿ ಹೈಕೋರ್ಟ್‌ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನೆಡೆಯಾಗಿದೆ ಎಂದು ಭಾವಿಸಬೇಕಿಲ್ಲ. ಕಾನೂನು ತಜ್ಞರ ತಂಡ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

RELATED ARTICLES

Latest News