ಬೆಂಗಳೂರು ದಕ್ಷಿಣ, ಅ.15– ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ಕ್ಷೇತ್ರದ ಶಾಸಕ ಡಾ. ಎಚ್.ಸಿ. ಬಾಲಕೃಷ್ಣ ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮಂಥವರ ಹಂತದಲ್ಲಿ ಈ ರೀತಿಯ ಚರ್ಚೆಗಳು ಸಾಧುವಲ್ಲ ಎಂದರು.
ಸಂಪುಟ ಪುನಾರಚನೆಯಾದರೆ, ನನ್ನ ಹಿರಿತನಕ್ಕೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಒಂದು ವೇಳೆ ಪುನಾರಚನೆಯಾಗದೆ ಇದ್ದರೆ ಅವಕಾಶ ಮಾಡಿಕೊಡಿ ಎಂದು ಕೇಳುವ ಸಾಧ್ಯತೆಯೂ ಇರುವುದಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕಮಾರ್ ಅವರ ಕಾಣಿಕೆಯಿದೆ. ಅದನ್ನು ಪರಿಗಣಿಸಿ, ಅವಕಾಶ ನೀಡಬಹುದು. ಹೈಕಮಾಂಡ್ ಗಮನಕ್ಕೂ ನನ್ನ ಹಿರಿತನದ ಬಗ್ಗೆ ಮಾಹಿತಿ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಈ ವಿಚಾರವಾಗಿ ಭರವಸೆ ಕೊಟ್ಟಿದ್ದಾರೆ. ನನಗೂ ವಿಶ್ವಾಸವಿದೆ ಎಂದರು.
ಯಾವುದೇ ಸಂಘಟನೆಗೆ ಜವಾಬ್ದಾರಿ ಇರಬೇಕಾದರೆ, ಮೊದಲು ನೋಂದಣಿಯಾಗಬೇಕು. ಆರ್‌ಎಸ್‌ಎಸ್ ಸಂಘಟನೆ ಸರ್ಕಾರ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಯಾವುದಾದರೂ ಕೃತ್ಯಗಳಾದರೆ ನೋಂದಣಿಯಾಗದ ಹೊರತು ಕ್ರಮಕೈಗೊಳ್ಳುವುದು ಕಷ್ಟಸಾಧ್ಯ. ಕೇರಳದಲ್ಲಿ ವ್ಯಕ್ತಿಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಆತ ಆರ್‌ಎಸ್‌ಎಸ್‌ನಲ್ಲಿ ಸಲಿಂಗಕಾಮಿಗಳು ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಾದರೆ ಸಂಘಟನೆಗಳು ನೋಂದಣಿಯಾಗುವುದು ಸೂಕ್ತ ಎಂದರು.
ಆರ್‌ಎಸ್‌ಎಸ್‌ನವರು ಮೊದಲು ನೋಂದಣಿ ಮಾಡಿಸಿಕೊಳ್ಳಲಿ. ಅವರನ್ನು ಹತ್ತಿಕ್ಕುವ ಅಗತ್ಯವಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಪರಸ್ಪರ ತಮಷ್ಟಕ್ಕೇ ತಾವೇ ಹತ್ತಿಕ್ಕಿಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಬಗ್ಗೆ ಮಾತನಾಡುವುದೇ ಅವಮಾನಕರ. ಆತ ಒಬ್ಬ ಜೋಕರ್. ಮಾಧ್ಯಮಗಳು ಆತನ ಸುದ್ದಿ ಪ್ರಸಾರ ಮಾಡುವ ಮೂಲಕ ತಮ ಗೌರವ ಕಳೆದುಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.
ಶಾಸಕರಾಗಿದ್ದವರಿಗೆ ತಮ ಹಕ್ಕುಗಳನ್ನು ಕೇಳಲು ವಿಧಾನಸಭೆ ಎಂಬ ವೇದಿಕೆ ಇದೆ. ಅದನ್ನು ಬಿಟ್ಟು ಸಾರ್ವಜನಿಕ ದೂರುದುಮಾನ ಕಾರ್ಯಕ್ರಮದಲ್ಲಿ ಹೋಗಿ ನಾಟಕ ಮಾಡುವುದು ಹಾಸ್ಯಾಸ್ಪದ. ಆತನ ನಡವಳಿಕೆ ಮೊದಲಿನಿಂದಲೂ ಎಲ್ಲರ ಗಮನದಲ್ಲಿದೆ. ಅವರದೇ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಹೋಗಿದ್ದಂತಹ ವ್ಯಕ್ತಿಯ ಬಗ್ಗೆ ಚರ್ಚೆ ಮಾಡಬೇಕೆ? ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಭೂ ಸ್ವಾಧೀನ ಸಂದರ್ಭದಲ್ಲಿ 60:40 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದರು. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್‌ಶಾ ಟೀಕೆ ಮಾಡಿರುವುದಕ್ಕೆ ಡಿ.ಕೆ.ಶಿವಕುಮಾರ್ ಈಗಾಗಲೇ ಉತ್ತರ ನೀಡಿದ್ದಾರೆ. ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆೆ. ಈ ಹಂತದಲ್ಲಿ ಅಪಸ್ವರ ಸರಿಯಲ್ಲ ಎಂದರು.